Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಔರಾದ್: ‘ಸಂಶೋಧಿತ ತಳಿ ಹಾಗೂ ಹಲವು ಕೃಷಿ ತಂತ್ರಜ್ಞಾನ ಬಳಸಿಕೊಳ್ಳುವ ಮೂಲಕ ತೊಗರಿ ಬೆಳೆ ಇಳುವರಿ ಹೆಚ್ಚಿಸ ಬಹುದು’ ಎಂದು ಜಂಟಿ ಕೃಷಿ ನಿರ್ದೇಶಕಿ ತಾರಾಮಣಿ ಜಿ.ಎಚ್. ಹೇಳಿದರು.

ರಾಷ್ಟ್ರೀಯ ಆಹಾರ ಭದ್ರತಾ ಯೋಜನೆಯಡಿ ತಾಲ್ಲೂಕಿನ ಮಣಿಗೆಂಪುರ ಗ್ರಾಮದ ರೈತ ಸೂರ್ಯಕಾಂತ ಪವಾರ್ ಅವರ ಹೊಲದಲ್ಲಿ ಸೋಮವಾರ ನಡೆದ ‘ತೊಗರಿ ಬೆಳೆ ಕ್ಷೇತ್ರೋತ್ಸವ’ ಕಾರ್ಯಕ್ರ ಮದಲ್ಲಿ ಅವರು ಮಾತನಾಡಿದರು.

 

‘ಜಿಆರ್‌ಜಿ- 811 ತೊಗರಿ ತಳಿ ಹಲವು ವೈಶಿಷ್ಟ್ಯದಿಂದ ಕೂಡಿದೆ. ಉತ್ತಮ ಇಳುವರಿ ಕೊಡುವ ಈ ತಳಿ ತೊಗರಿಗೆ ಬೇಡಿಕೆಯೂ ಜಾಸ್ತಿ ಇದೆ. ಹೀಗಾಗಿ ಮಣಿಗೆಂಪುರ ಗ್ರಾಮದ ಆಯ್ದ ರೈತರ ಹೊಲದಲ್ಲಿ ಈ ತಳಿ ತೊಗರಿ ಬೆಳೆಸಿ ರೈತರಿಗೆ ಮನವರಿಕೆ ಮಾಡಿಕೊಡಲಾಗುತ್ತಿದೆ’ ಎಂದರು.

‘ರೈತರು ತಮಗೆ ಆಗುವ ಹಾನಿ ತಪ್ಪಿಸಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು. ಈ ಕುರಿತು ಕೃಷಿ ತಜ್ಞರಿಂದ ಮಾಹಿತಿ ಪಡೆದುಕೊಳ್ಳಬೇಕು’ ಎಂದು ಅವರು ಸಲಹೆ ನೀಡಿದರು.

ಉಪ ಕೃಷಿ ನಿರ್ದೇಶಕ ಎನ್. ಕೆಂಗೇಗೌಡ ಮಾತನಾಡಿ, ‘ಸಾವಯವ ಕೃಷಿ ಪದ್ಧತಿಯಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇಲ್ಲಿ ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಉತ್ಪಾದನೆಯಾಗುತ್ತದೆ. ರೈತರು ಹವಮಾನ ಹಾಗೂ ಮಾರುಕಟ್ಟೆ ಆಧರಿಸಿ ಬೆಳೆ ಬೆಳೆಯುವುದನ್ನು ರೂಢಿಸಿಕೊಳ್ಳಬೇಕು’ ಎಂದರು.

‘ಸದ್ಯ ಹಿಂಗಾರು ಜೋಳದ ಬೆಳೆಗೆ ಲದ್ದಿ ಹುಳು ಬಾಧೆ ಕಂಡು ಬಂದಿದೆ. ಅಂತಹ ಕಡೆ ಆಯಾ ರೈತ ಸಂಪರ್ಕ ಕೇದ್ರದ ಅಧಿಕಾರಿಗಳಿಂದ ಮಾಹಿತಿ ಪಡೆದು ರೋಗ ನಿಯಂತ್ರಕ ಔಷಧ ಸಿಂಪರಣೆ ಮಾಡಬೇಕು’ ಅವರು
ಸಲಹೆ ನೀಡಿದರು.

ಸಹಾಯಕ ಕೃಷಿ ನಿರ್ದೇಶಕ ಎಂಎಕೆ ಅನ್ಸಾರಿ, ‘ಕೃಷಿ ಇಲಾಖೆ ರೈತರಿಗೆ ಅನೇಕ ಯೋಜನೆ ಜಾರಿಗೆ ತಂದಿದೆ. ವಿವಿಧ ಕೃಷಿ ಯಂತ್ರೋಪಕರಣಗಳು ರಿಯಾಯ್ತಿ ದರದಲ್ಲಿ ನೀಡಲಾಗುತ್ತದೆ. ಅದರ ಪ್ರಯೋಜನ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಕೃಷಿ ಅಧಿಕಾರಿ ಮಾಣಿಕ ಶೇರಿಕಾರ, ಸೌಮ್ಯ, ಪ್ರೇಮದಾಸ, ಕೃಷಿ ತಾಂತ್ರಿಕ ವ್ಯವಸ್ಥಾಪಕ ಪಾಂಡುರಂಗ ಪಾಟೀಲ, ಗ್ರಾಮ ಪಂಚಾಯಿತಿ ಸದಸ್ಯ ಸಿದ್ದರಾಮೇಶ್ವರ, ಅನೀಲ ಬಿರಾದಾರ, ಮಣಿಗೆಂಪುರ ರೈತರು ಇದ್ದರು.

 

ಬೀದರ್ ಜಿಲ್ಲೆಯಲ್ಲಿ ತೊಗರಿ ಬೆಳೆಯಲು ಉತ್ತಮ ಹವಾಗುಣ ಇದೆ. ರೈತರು ಈ ಬಗ್ಗೆ ತಿಳಿದುಕೊಂಡು ವೈಜ್ಞಾನಿಕ ವಿಧಾನ ಅನುಸರಿಸಿದರೆ ಹೆಚ್ಚಿನ ಅನುಕೂಲವಾಗಲಿದೆ.

– ತಾರಾಮಣಿ ಜಿ.ಎಚ್., ಜಂಟಿ ಕೃಷಿ ನಿರ್ದೇಶಕಿ