Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love


ಬೀದರ :ನವೆಂಬರ್ 11 (ಕರ್ನಾಟಕ ವಾರ್ತೆ): ನ್ಯೂಮೋಕಾಕಲ್ ಕಾಂಜುಗೇಟ್ ಲಸಿಕಾ ಕಾರ್ಯಕ್ರಮಕ್ಕೆ ಬ್ರಿಮ್ಸ್ನಲ್ಲಿ ನವೆಂಬರ್ 11ರಂದು ನಡೆದ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು, ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದಡಿಯಲ್ಲಿ ಒಂದು ಹೊಸ ಲಸಿಕೆ ಪಿಸಿವಿಯನ್ನು ಪರಿಚಯಿಸಲಾಗುತ್ತಿದೆ. ಇದು ನ್ಯೂಮೊಕಾಕಸ್ ಎಂಬ ಬ್ಯಾಕ್ಟೇರಿಯಾದಿಂದ ಉಂಟಾಗುವ ನ್ಯೂಮೋನಿಯಾ ಮತ್ತು ಮೆನಿಂಜೈಟಿಸ್ ಖಾಯಿಲೆಗಳಿಂದ ಮಕ್ಕಳನ್ನು ರಕ್ಷಿಸುತ್ತದೆ. ಐದು ವರ್ಷದೊಳಗಿನ ಮಕ್ಕಳಲ್ಲಿ ಉಂಟಾಗುವ ನ್ಯೂಮೋನಿಯಾ ಕಾಯಿಲೆಗೆ ನ್ಯೂಮೊಕಾಕಸ್ ಬ್ಯಾಕ್ಟೇರಿಯಾ ಪ್ರಮುಖ ಕಾರಣವಾಗಿದೆ. ನ್ಯೂಮೋಕಾಕಲ್ ಕಾಯಿಲೆಯು ಗಂಭೀರ ಸ್ವರೂಪ ಪಡೆಯಬಹುದು ಹಾಗೂ ಕುಟುಂಬದ ಆರ್ಥಿಕ ಹೊರೆ ಉಂಟು ಮಾಡಬಹುದು. ಆದುದರಿಂದ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಕೊಡಲಾಗುವುದು ಎಂದು ತಿಳಿಸಿದರು.
ಡಬ್ಲೂ.ಹೆಚ್.ಓದ ಎಸ್.ಎಂ.ಓ. ಡಾ.ಅನಿಲಕುಮಾರ ತಾಳಿಕೋಟೆ ಅವರು ಮಾತನಾಡಿ, ಪಿ.ಸಿ.ವಿ ಲಸಿಕೆ ನೀಡುವುದರಿಂದ ಮಕ್ಕಳನ್ನು ನಿಮೋನಿಯಾದಿಂದ ರಕ್ಷಿಸಬಹುದು. ಹುಟ್ಟಿದ ಮೊದಲ ವರ್ಷದಲ್ಲಿ ಪಿ.ಸಿ.ವಿ ಯು 2 ಪ್ರಾಥಮಿಕ ಡೋಜ್ ಹಾಗೂ ಒಂದು ಬೂಸ್ಟರ್ ಡೋಜ್ ನೀಡಬಹುದು. ಒಂದು ವರ್ಷಕ್ಕೆ ಮೀರಿ ತಡವಾದಲ್ಲಿ ಹುಟ್ಟಿದ ಮೊದಲ ವರ್ಷದೊಳಗೆ ಮಗು ಕನಿಷ್ಟ ಒಂದು ಡೋಜ್ ಪಿ.ಸಿ.ವಿಯನ್ನು ಪಡೆದಿದ್ದರೆ ಮುಂದಿನ ಡೋಜ್‌ಗಳನ್ನು ನೀಡಬಹುದಾಗಿದೆ ಎಂದು ವಿವರಿಸಿದರು ಮತ್ತು ಕೋವಿಡ್-19 ಲಸಿಕಾ ಕ್ರಿಯಾ ಯೋಜನೆಯ ಬಗ್ಗೆ ವಿವರವಾಗಿ ತರಬೇತಿ ನೀಡಿದರು.
ಕಾರ್ಯಕ್ರಮ ಅಧಿಕಾರಿ ಡಾ.ರಾಜಶೇಖರ ಪಾಟೀಲ ಅವರು ಮಾತನಾಡಿ, ಪಿ.ಸಿ.ವಿ ಲಸಿಕೆ ಸುರಕ್ಷಿತವಾಗಿದೆ. ಇತರೆ ಯಾವುದೇ ಲಸಿಕೆಯಂತೆ ಮಗುವಿಗೆ ಪಿ.ಸಿ.ವಿ ಲಸಿಕೆ ಪಡೆದ ನಂತರ ಸೌಮ್ಯವಾದ ಜ್ವರ ಬರಬಹುದು ಅಥವಾ ಚುಚ್ಚುಮದ್ದಿನ ಸ್ಥಳದಲ್ಲಿ ಕೆಂಪಾಗಬಹುದು. ಇದರ ಬಗ್ಗೆ ಆತಂಕ ಬೇಡ ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ವಿ.ಜಿ.ರೆಡ್ಡಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮಗುವಿಗೆ ಒಂದೂವರೆ ತಿಂಗಳು, ಮೂರುವರೆ ತಿಂಗಳು ಮತ್ತು ಒಂಬತ್ತನೇ ತಿಂಗಳ ವಯಸ್ಸಿನಲ್ಲಿ ಮೂರು ಡೋಜ್‌ಗಳ ಪಿ.ಸಿ.ವಿ ಲಸಿಕೆಯನ್ನು ಹಾಕಿಸಿ ಮಗುವಿನ ಸಂಪೂರ್ಣ ರಕ್ಷಣೆಗಾಗಿ ಪಿ.ಸಿ.ವಿ ಲಸಿಕೆಯು ಮೂರು ಡೋಜ್‌ಗಳನ್ನು ತಪ್ಪದೇ ಕೊಡಿಸಿ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬ್ರಿಮ್ಸ್ನ ನಿರ್ದೇಶಕರಾದ ಡಾ.ಚಂದ್ರಕಾAತ ಚಿಲ್ಲರ್ಗಿ, ಹೆಚ್.ಓ.ಡಿ ಮತ್ತು ಜಿಲ್ಲಾ ಕಾರ್ಯಕ್ರಮಾಧಿಕಾರಿ ಡಾ.ಶಾಂತಲಾ ಕೌಜಲಗೆ, ಜಿಲ್ಲಾ ಕಾರ್ಯಕ್ರಮ ವ್ಯವಸ್ಥಾಪಕರಾದ ಉಮೇಶ ಬಿರಾದರ, ಲಸಿಕಾ ಮೇಲ್ವಿಚಾರಕರಾದ ಲೋಕೇಶ, ಕಾರ್ಯಕ್ರಮ ಸಂಯೋಜಕರಾದ ಶಿವಶಂಕರ ಬೇಮಳಗಿ, ಅಶೋಕ, ತಾಲೂಕಾ ಆರೋಗ್ಯ ಅಧಿಕಾರಿಗಳು, ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ ಇದ್ದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಸಂಗಪ್ಪ ಕಾಂಬಳೆ ನಿರೂಪಿಸಿದರು. ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶ್ರಾವಣ ಜಾಧವ ವಂದಿಸಿದರು.