Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬಿಟ್ ಕಾಯಿನ್ ಬಿರುಗಾಳಿ: ಆರೋಪ ಪಟ್ಟಿಯಲ್ಲಿ ಕಾಲ್ – ಚಾಟ್ ಮಾಹಿತಿ ಮುಚ್ಚಿಟ್ಟದ್ದು ಯಾಕೆ?

 

ಬಿಟ್ ಕಾಯಿನ್ ಪ್ರಕರಣದ ವಿಷಯದಲ್ಲಿ ರಾಜ್ಯದ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಪರಸ್ಪರ ಆರೋಪ- ಪ್ರತ್ಯಾರೋಪಗಳು ಬಿರುಸುಗೊಂಡಿವೆ. ಬಿಜೆಪಿ ಮತ್ತು ಕಾಂಗ್ರೆಸ್ ಪರಸ್ಪರ ಒಬ್ಬರ ಮೇಲೆ ಒಬ್ಬರು ಆರೋಪ ಮಾಡುತ್ತಿದ್ದಾರೆ.

ಈ ನಡುವೆ, ಪ್ರಕರಣದ ಕುರಿತು ಸಾರ್ವಜನಿಕರಿಗೆ ಸರಿಯಾದ ಮಾಹಿತಿ ನೀಡಿ, ರಾಜಕೀಯ ಕೆಸರೆರಚಾಟದಿಂದ ಗೊಂದಲದ ಗೂಡಾಗಿರುವ ವಿವಾದದ ಕುರಿತು ಸ್ಪಷ್ಟನೆ ನೀಡಬೇಕಾದ ಪೊಲೀಸರು ಕೂಡ ದ್ವಂದದ ಹೇಳಿಕೆ ನೀಡುವ ಮೂಲಕ ಇಡೀ ವಿವಾದವನ್ನು ಇನ್ನಷ್ಟು ಗೋಜಲುಗೊಳಿಸಿದ್ದಾರೆ.

ಬೆಂಗಳೂರು ನಗರ ಕಮೀಷನರ್ ಕಮಲ್ ಪಂಥ್ ಅವರು ಒಂದು ಹೇಳಿಕೆ ನೀಡಿ, ಪ್ರಕರಣದ ವಿಷಯದಲ್ಲಿ ಯಾವುದೇ ವಿದೇಶಿ ತನಿಖಾ ಸಂಸ್ಥೆಗಳೂ ಕರ್ನಾಟಕ ಪೊಲೀಸರಿಂದ ಮಾಹಿತಿ ಕೋರಿಲ್ಲ ಎಂದಿದ್ದಾರೆ. ಆದರೆ, ಇದೇ ಪ್ರಕರಣದ ಕುರಿತು ಸಿಬಿಐ ಇಂಟರ್ ಪೋನ್ ಮಾಹಿತಿ ಕೋರಿದ ಬಳಿಕ ರಾಜ್ಯ ಸರ್ಕಾರ ಆ ಕುರಿತ ಮಾಹಿತಿಯನ್ನು ನೀಡಿರುವ ಕುರಿತು ಈಗಾಗಲೇ ಸ್ವತಃ ರಾಜ್ಯ ಸರ್ಕಾರವೇ ಬರೆದ ಪತ್ರ ಬಹಿರಂಗಗೊಂಡಿದೆ.

 

ಹಾಗಿರುವಾಗ ಸಿಬಿಐ ಇಂಟರ್ ಪೋಲ್ ಮಾಹಿತಿ ಕೇಳಿದ್ದು ಯಾಕೆ? ಮತ್ತು ವಿದೇಶಿ ತನಿಖಾ ಸಂಸ್ಥೆಗಳು ಮಾಹಿತಿ ಕೋರದೆ ಇಂಟರ್ ಪೋಲ್ ಕೋರಲು ಸಾಧ್ಯವೆ? ಹಾಗೂ ಯಾವುದೇ ವಿದೇಶಿ ಸಮಸ್ಥೆ ಇಂಟರ್ ಪೋಲ್ ಮೂಲಕವಲ್ಲದೆ ನೇರವಾಗಿ ಒಂದು ರಾಜ್ಯದ ಪೊಲೀಸರಿಂದ ಯಾವುದೇ ಅಂತಾರಾಷ್ಟ್ರೀಯ ಅಪರಾಧ ಪ್ರಕರಣಗಳಲ್ಲಿ ಮಾಹಿತಿ ಪಡೆಯುವುದು ಸಾಧ್ಯವೇ ಎಂಬುದು ಕಮೀಷನರ್ ಮಾತುಗಳು ಸ್ಪಷ್ಟಪಡಿಸದೇ ಬಿಟ್ಟ ಪ್ರಶ್ನೆಗಳು.

ಈ ನಡುವೆ ಶ್ರೀಕಿಯಿಂದ ವಶಪಡಿಸಿಕೊಂಡಿರುವುದಾಗಿ ಹೇಳಿದ್ದ ಬರೋಬ್ಬರಿ ಒಂಭತ್ತು ಕೋಟಿ ರೂಪಾಯಿ ಮೌಲ್ಯದ 31 ಬಿಟ್ ಕಾಯಿನ್ ಗಳನ್ನು ಸಂಗ್ರಹಿಸಲು ತಮ್ಮದೇ ಆದ ಬಿಟ್ ಕಾಯಿನ್ ವ್ಯಾಲೆಟ್ ತೆರೆಯಲು ಸರ್ಕಾರದ ಅನುಮತಿ ಪಡೆದುಕೊಂಡಿದ್ದ ಸಿಸಿಬಿ ಪೊಲೀಸರು, ಆ ಬಳಿಕ ಆ ಕಾಯಿನ್ ಗಳನ್ನು ಏನು ಮಾಡಿದರು? ಆ ಬಿಟ್ ಕಾಯಿನ್ ವ್ಯಾಲೆಟ್ ಈಗಲೂ ಅಸ್ತಿತ್ವದಲ್ಲಿದೆಯೇ? ಆ ವ್ಯಾಲೆಟ್ ನ ವಹಿವಾಟು ನಡೆಸಲು ಯಾವ ಬ್ಯಾಂಕ್ ಖಾತೆಯನ್ನು ಅದಕ್ಕೆ ಜೋಡಿಸಿದ್ದರು? ಆ ವ್ಯಾಲೆಟ್ ಮತ್ತು ಬ್ಯಾಂಕ್ ಖಾತೆಯ ಮಾಹಿತಯನ್ನು ಸಿಸಿಬಿ ಪೊಲೀಸರು ಯಾಕೆ ಕಾಲಕಾಲಕ್ಕೆ ಬಹಿರಂಗಪಡಿಸಿಲ್ಲ? ಕನಿಷ್ಟ ಇಡೀ ಹಗರಣದಲ್ಲಿ ಸಿಸಿಬಿ ಮುಖ್ಯಸ್ಥರು ಮತ್ತು ಇತರೆ ಪೊಲೀಸ್ ಉನ್ನತಾಧಿಕಾರಿಗಳು ಮತ್ತು ಅಧಿಕಾರರೂಢ ರಾಜಕಾರಣಿಗಳ ವಿರುದ್ಧವೇ ಗಂಭೀರ ಆರೋಪ ಕೇಳಿಬರುತ್ತಿರುವಾಗಲಾದರೂ ಆ ಮಾಹಿತಿಯನ್ನು ಬಹಿರಂಗಪಡಿಸಬೇಕಿತ್ತಲ್ಲವೆ? ಎಂಬ ಪ್ರಶ್ನೆಗಳೂ ಇವೆ.

ಹಾಗೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಕರಣದ ಕುರಿತು ಕಾಂಗ್ರೆಸ್ ಆರೋಪಗಳಿಗೆ ಕಿಡಿಕಾರುತ್ತಾ, ಪ್ರಕರಣದ ಬಗ್ಗೆ ತನಿಖೆ ನಡೆಸಿದ್ದೇ ತಮ್ಮ ಬಿಜೆಪಿ ಸರ್ಕಾರ. ಇದೀಗ ಪ್ರಕರಣವನ್ನು ಇಡಿ ತನಿಖೆಗೆ ವಹಿಸಿದ್ದೇವೆ. ಇಡಿ ತನಿಖೆ ಆರಂಭಿಸಿದೆ ಎಂದಿದ್ದಾರೆ. ಆದರೆ, ಪ್ರಕರಣದ ಪ್ರಮುಖ ಆರೋಪಿ, ತನ್ನ ಸ್ವಯಂಪ್ರೇರಿತ ಹೇಳಿಕೆಯಲ್ಲೇ ತಾನು ನಡೆಸಿದ ಬಿಟ್ ಫೀನಿಕ್ಸ್ ನ ಸುಮಾರು ಐದು ಸಾವಿರ ಕೋಟಿ ಮೊತ್ತದ ಬಿಟ್ ಕಾಯಿನ್ ಹ್ಯಾಕ್ ಸೇರಿದಂತೆ ಹತ್ತಾರು ಸಾವಿರ ಕೋಟಿ ಮೊತ್ತದ ಹ್ಯಾಕ್ ಬಗ್ಗೆ ನ್ಯಾಯಾಧೀಶರ ಮುಂದೆಯೇ ಒಪ್ಪಿಕೊಂಡಿದ್ದರೂ ಆತ ಬಿಡುಗಡೆಯಾಗಿ ಆರು ತಿಂಗಳು ಕಳೆದಿದ್ದರೂ ಈವರೆಗೂ ತಮ್ಮ ಸರ್ಕಾರ ಆತನ ಜಾಮೀನನ್ನು ಪ್ರಶ್ನಿಸಿ, ಮೇಲ್ಮನಿಯನ್ನು ಯಾಕೆ ಸಲ್ಲಿಸಿಲ್ಲ? ಹತ್ತಾರು ಸಾವಿರ ಕೋಟಿ ಹ್ಯಾಕ್ ವಂಚನೆ ಮತ್ತು ನೂರಾರು ಕೋಟಿ ಸ್ವತಃ ಸರ್ಕಾರಿ ಇಪ್ರೊಕ್ಯೂರ್ ಮೆಂಟ್ ಮತ್ತು ಜನ್ ಧನ್ ಖಾತೆಗಳನ್ನು ಹ್ಯಾಕ್ ಮಾಡಿ ವಂಚನೆ ಎಸಗಿರುವ ವ್ಯಕ್ತಿಯನ್ನು ಮುಕ್ತವಾಗಿ ಓಡಾಡಿಕೊಂಡಿರಲು ಬಿಟ್ಟಿರುವುದು ಯಾಕೆ ಎಂಬ ಬಗ್ಗೆಯೂ ತನಿಖೆ ನಡೆಸಿದ ಸಿಸಿಬಿಯಾಗಲೀ, ಗೃಹ ಸಚಿವರಾಗಲೂ ಸ್ಪಷ್ಟಪಡಿಸಿಲ್ಲ.

ಹಾಗೇ ಹಾಲಿ ಆರಾಮವಾಗಿ ಮುಕ್ತವಾಗಿ ಓಡಾಡಿಕೊಂಡಿರುವ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿಯ ಹೇಳಿಕೆಯಲ್ಲಿ ಉಲ್ಲೇಖಿಸಿರುವ ಬಹುತೇಕ ಹ್ಯಾಕ್ ಗಳಿಗೆ ಆಧಾರವಿಲ್ಲ. ಅವುಗಳಲ್ಲ ವಹಿವಾಟು ನಡೆದಿರುವುದು ಪತ್ತೆಯಾಗಿಲ್ಲ ಎಂದಿದ್ದಾರೆ ಕಮೀಷನ್ ಕಮಲ್ ಪಂಥ್. ಆದರೆ, ಹಾಗೆ ನ್ಯಾಯಾಲಯದ ಮುಂದೆ ಸುಳ್ಳು ಹೇಳಿಕೆ ನೀಡಿದ ಸಂಬಂಧ ಆ ಆರೋಪಿಯ ವಿರುದ್ಧ ಯಾವ ಕ್ರಮಜರುಗಿಸಲಾಗಿದೆ? ತನಿಖೆಯನ್ನು ದಿಕ್ಕು ತಪ್ಪಿಸಿದ ಬಗ್ಗೆ ಪೊಲೀಸರು ಏನು ಮಾಡಿದ್ದಾರೆ? ಅಥವಾ ಆತ ಮಾದಕ ಪದಾರ್ಥ ಸೇವಿಸಿ ಅಂತಹ ಹೇಳಿಕೆ ನೀಡಿದ್ದನೇ? ಹಾಗೆ ನೀಡಿದ್ದರೆ ಆ ಬಗ್ಗೆ ಪೊಲೀಸರು ಏನು ಮಾಡಿದರು? ಎಂಬ ಕುರಿತ ವಿವರಗಳೂ ಹೊರಬರಬೇಕಿದೆ.

ಜೊತೆಗೆ, ಬಹಳ ಮುಖ್ಯವಾಗಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತು ಆತನ ಸಹಚರರಾದ ಪ್ರಸೀದ್ ಶೆಟ್ಟಿ ಅಲಿಯಾಸ್ ಚಿಕ್ಕು, ರಾಬಿನ್‌ ಖಂಡೇಲ್‌ವಾಲ್‌, ಸುರೇಶ್‌ ಹೆಗ್ಡೆ ಅಲಿಯಾಸ್‌ ಸುನೇಶ್‌, ಮತ್ತು ಸುಜಯ್ ರಾಜ್ ಅವರುಗಳು ವಿವಿಧ ರಾಜಕಾರಣಿಗಳೊಂದಿಗೆ ಹೊಂದಿರುವ ನಂಟಿನ ಕುರಿತು ಹಲವು ಸಂಶಯಗಳು ಇದೀಗ ಎದ್ದಿವೆ. ಶ್ರೀಕೃಷ್ಣ ಕಾಂಗ್ರೆಸ್ ಯುವ ನಾಯಕ ನಲ್ಪಾಡ್ ಆಪ್ತ ಎಂದು ಬಿಜೆಪಿ ಪಾಳೆಯ ಆರೋಪಿಸುತ್ತಿದ್ದರೆ, ಶ್ರೀಕಿಯಿಂದ ಸಾವಿರಾರು ಕೋಟಿ ಮೌಲ್ಯದ ಅಕ್ರಮ ಹ್ಯಾಕ್ ವಹಿವಾಟು ನಡೆಸಿದ ಆರೋಪಿತ ಪ್ರಸೀದ್ ಶೆಟ್ಟಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಆಪ್ತ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದಾರೆ. ಆದರೆ, ಸಿಸಿಬಿಯ ಆರೋಪಪಟ್ಟಿಯಲ್ಲಾಗಲೀ, ಅಥವಾ ಈವರೆಗಿನ ಪೊಲೀಸರ ಹೇಳಿಕೆಗಳಲ್ಲೇ ಆಗಲೀ, ಈ ಆರೋಪಿಗಳ ರಾಜಕೀಯ ಹಿನ್ನೆಲೆಯ ಬಗ್ಗೆಯಾಗಲೀ, ಸಾಮಾಜಿಕ ಮತ್ತು ಕೌಟುಂಬಿಕ ಹಿನ್ನೆಲೆಯ ಬಗ್ಗೆಯಾಗಲೀ ಹೆಚ್ಚಿನ ವಿವರಗಳು ಲಭ್ಯವಿಲ್ಲ!

ಈ ಗಂಭೀರ ಪ್ರಕರಣದ ಆರೋಪಿಗಳು ಹೊಂದಿದ್ದಾರೆ ಎಂದು ಹೇಳಲಾಗುತ್ತಿರುವ ಈ ಪ್ರಭಾವಿ ನಾಯಕರ ನಂಟೂ ಸೇರಿದಂತೆ ಅವರ ರಾಜಕೀಯ ಮತ್ತು ಸಾಮಾಜಿಕ ನಂಟಿನ ಕುರಿತ ವಿವರಗಳನ್ನು ಬಚ್ಚಿಡುವ ಉದ್ದೇಶದಿಂದಲೇ ಪೊಲೀಸರು ಪ್ರಮುಖ ಆರೋಪಿ ಶ್ರೀಕೃಷ್ಣ ಸೇರಿದಂತೆ ಯಾವುದೇ ಆರೋಪಿಯ ಕಾಲ್ ಹಿಸ್ಟರಿ, ಚಾಟ್ ಹಿಸ್ಟರಿ ಮುಂತಾದ ನಿರ್ಣಾಯಕ ಮಾಹಿತಿಯನ್ನು ಆರೋಪಪಟ್ಟಿಯಿಂದ ಕೈಬಿಟ್ಟಿದ್ದಾರೆಯೇ ? ಎಂಬ ಪ್ರಶ್ನೆ ಕೂಡ ಎದ್ದಿದೆ.

ಹಾಗಾಗಿ, ಒಂದು ಕಡೆ ಪ್ರಕರಣದ ತನಿಖೆ ನಡೆಸಿ, ಈ ಅಂತಾರಾಷ್ಟ್ರೀಯ ಮಟ್ಟದ ಹತ್ತಾರು ಸಾವಿರ ಕೋಟಿ ವಂಚನೆಯ ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ, ಆರೋಪಿಗಳನ್ನು ಬಳಸಿಕೊಂಡು ಯಾರೇ ಲಾಭ ಮಾಡಿಕೊಂಡಿದ್ದರೂ ಅವರ ವಿರುದ್ಧ ಕ್ರಮ ಜರುಸಬೇಕಾಗಿದ್ದ ಸರ್ಕಾರ, ಜಗಳವಾಡಿಕೊಂಡ ಮಕ್ಕಳಂತೆ “ಅವನು ಚಿವುಟಿದ, ಇವನೂ ಚಿವುಟಿದ” ಎಂಬಂತಹ ನೆಗೆಪಾಟಲಿನ ಬಾಲಿಶತನ ತೋರುತ್ತಿದೆ. ಮತ್ತೊಂದು ಕಡೆ ಸಿಸಿಬಿ ಪೊಲೀಸರ ತನಿಖೆಯ ಗುಣಮಟ್ಟ ಎಂತಹದ್ದು ಮತ್ತು ಅವರ ಉದ್ದೇಶ ನಿಜವಾಗಿಯೂ ಪ್ರಕರಣವನ್ನು ಬೇಧಿಸುವುದಾಗಿತ್ತೆ ಅಥವಾ ಅನ್ಯ ಉದ್ದೇಶವಿತ್ತೆ ಎಂಬ ಅನುಮಾನಗಳನ್ನು ಸ್ವತಃ ಆರೋಪಪಟ್ಟಿಯೇ ಎತ್ತುತ್ತಿದೆ.