Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಬೀದರ್: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು 28 ತಿಂಗಳು ಆದರೂ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ರಚನೆ ಮಾಡಿಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಮಲತಾಯಿ ಧೋರಣೆ ಮಾಡುತ್ತಿದೆ. ಎರಡನೇ ದರ್ಜೆ ನಾಗರಿಕರಂತೆ ವರ್ತಿಸುತ್ತಿದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ಧಾಳಿ ನಡೆಸಿದರು.

‘ಕಲ್ಯಾಣ ಕರ್ನಾಟಕ ಎಂದು ಘೋಷಣೆ ಮಾಡಿದರೂ ₹ 1,500 ಕೋಟಿ ಅನುದಾನದಲ್ಲಿ ಕೇವಲ ₹103 ಕೋಟಿ ಮಾತ್ರ ಅಭಿವೃದ್ಧಿ ಕಾರ್ಯಗಳಿಗೆ ಖರ್ಚು ಮಾಡಿದೆ. ಉಳಿದ ಹಣ ಇನ್ನೂ ಖರ್ಚಾಗಿಲ್ಲ. ಸರ್ಕಾರ, ಜನರಿಗೆ ಸುಳ್ಳು ಭರವಸೆ ಕೊಡುವಲ್ಲಿ ಕಾಲ ಹರಣ ಮಾಡುತ್ತಿದೆ’ ಎಂದು ನಗರದಲ್ಲಿ ಭಾನುವಾರ ಮಾಧ್ಯಮಗೋಷ್ಠಿಯಲ್ಲಿ ಟೀಕಿಸಿದರು.

‘ಕೆಕೆಆರ್‌ಡಿಬಿ ಕೇವಲ 75 ಕಾಮಗಾರಿಗಳನ್ನು ಮಾತ್ರ ಕೈಗೆತ್ತಿಕೊಂಡಿದೆ. ವರ್ಷ ಮುಗಿಯಲು ಬಂದರೂ ಸರ್ಕಾರದ ಬಳಿ ಕಡತಗಳು ಹಾಗೆಯೇ ಉಳಿದುಕೊಂಡಿವೆ. ಖಾಲಿ ಹುದ್ದೆಗಳ ಭರ್ತಿ ಮಾಡಿಲ್ಲ’ ಎಂದು ಆರೋಪಿಸಿದರು.

‘ಬಸವಕಲ್ಯಾಣ ಉಪ ಚುನಾವಣೆಯ ಪೂರ್ವದಲ್ಲಿ ಅನುಭವ ಮಂಟಪಕ್ಕೆ ಶಂಕುಸ್ಥಾಪನೆ ನೆರವೇರಿಸಿ ಹೋದರೂ ಕಾಮಗಾರಿಯ ಡಿಪಿಆರ್‌ ಆಗಿಲ್ಲ. ಚುನಾವಣೆಯಲ್ಲಿ ಮರಾಠರಿಗೆ 2ಎ ಪ್ರಮಾಣಪತ್ರ ಕೊಡುವ, ಬಿಎಸ್‌ಎಸ್‌ಗೆ ಪುನರಾರಂಭಿಸುವ ಭರವಸೆ ಈಡೇರಿಸಿಲ್ಲ. ವೀರಶೈವ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಿದರೂ ಒಂದೇ ಒಂದು ಕಾರ್ಯಕ್ರಮ ನಡೆದಿಲ್ಲ. ಸುಳ್ಳು ಹೇಳುವುದೇ ಬಿಜೆಪಿ ಕೆಲಸವಾಗಿದೆ’ ಎಂದರು.

‘ದೇಶದಲ್ಲಿ 700 ರೈತರು ಮೃತಪಟ್ಟ ಮೇಲೆ ಕೇಂದ್ರ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ವಾಪಸ್‌ ಪಡೆದಿದೆ. ಮೊದಲೇ ಪಡೆದಿದ್ದರೆ ರೈತರ ಜೀವ ಉಳಿಯುತ್ತಿದ್ದವು. ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರನ್ನು ಕೊಂದ ಘೋಡ್ಸೆ ಮಂದಿರ ಕಟ್ಟಲು ಹೊರಟವರು ಈಗ ಗ್ರಾಮ ಸ್ವರಾಜ್‌ದ ಬಗ್ಗೆ ಮಾತನಾಡಲು ಹೊರಟಿದ್ದಾರೆ. ಬಿಜೆಪಿಯವರಿಗೆ ಮಾನ ಮರ್ಯಾದೆಯೇ ಇಲ್ಲ’ ಎಂದು ಕಿಡಿ ಕಾರಿದರು.

‘ಉಪ ಚುನಾವಣೆಯಲ್ಲಿ ಬಿಜೆಪಿಗೆ ಸೋಲಾದ ಬಳಿಕ ಬಿಜೆಪಿಗೆ ಬುದ್ದಿ ಬಂದಿದೆ. ಪೆಟ್ರೋಲ್‌ ಬೆಲೆ ₹ 50 ಹೆಚ್ಚಿಸಿ ಈಗ ₹ 10 ಇಳಿಸಿದ್ದಾರೆ. ಕೃಷಿ ಕಾಯ್ದೆಗಳನ್ನು ಹಿಂದಕ್ಕೆ ಪಡೆದಿದ್ದಾರೆ. ರಸ ಗೊಬ್ಬರದ ಸಮಸ್ಯೆ ಸರ್ಕಾರಕ್ಕೆ ಕಾಣಿಸುತ್ತಿಲ್ಲ. ವೈಬ್‌ಸೈಟ್‌ನಲ್ಲಿ ಅಂಕಿ ತೋರಿಸಿದರೆ ಸಾಲದು ಮಾರುಕಟ್ಟೆಯಲ್ಲಿ ರಸಗೊಬ್ಬರ ಇದೆಯೇ ಎಂಬುದನ್ನು ಪ್ರತ್ಯಕ್ಷವಾಗಿ ಭೇಟಿ ನೀಡಿ ಪರಿಶೀಲಿಸಬೇಕು’ ಎಂದರು.

‘ದೇಶದಲ್ಲಿರುವ 10 ಬೆಳೆ ವಿಮೆ ಕಂಪನಿಗಳಿಗೆ ಕೇಂದ್ರ ಸರ್ಕಾರ ಪರೋಕ್ಷವಾಗಿ ಲಾಭ ಮಾಡಿಕೊಡುತ್ತಿದೆ. ಅತಿವೃಷ್ಟಿಯಿಂದ ಬೆಳೆ ಹಾನಿ ಆದಾಗ ತಕ್ಷಣ ಸಹಾಯವಾಣಿಗೆ ದೂರವಾಣಿ ಕರೆ ಮಾಡಬೇಕು ಹಾಗೂ ವೈಬ್‌ಸೆಟ್‌ನಲ್ಲಿ ದಾಖಲಿಸಬೇಕು ಎನ್ನುವ ನಿಬಂಧನೆ ಹಾಕಲಾಗಿದೆ. ಅತಿವೃಷ್ಟಿಯಾದಾಗ ವೆಬ್‌ಸೈಟ್‌ ಬ್ಲಾಕ್‌ ಮಾಡಿ ವಿಮಾ ಕಂಪನಿಗಳಿಗೆ ಲಾಭ ಮಾಡಿಕೊಡಲಾಗುತ್ತಿದೆ’ ಎಂದು ಆರೋಪಿಸಿದರು.

‘ಕೇಂದ್ರ ಸರ್ಕಾರ ಆರು ವರ್ಷದಲ್ಲಿ ಬೆಳೆ ವಿಮೆ ಕಂಪನಿಗಳಿಗೆ ₹ 2 ಸಾವಿರ ಕೋಟಿ ಲಾಭ ಮಾಡಿಕೊಟ್ಟಿದೆ. ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಿಂದ ರೈತರಿಗಿಂತ ವಿಮಾ ಕಂಪನಿಗೆ ಹೆಚ್ಚು ಲಾಭವಾಗಿದೆ. ಬೀದರ್ ಜಿಲ್ಲೆಯೊಂದರಲ್ಲೇ ವಿಮಾ ಕಂಪನಿಗೆ ಒಂದೇ ವರ್ಷದಲ್ಲಿ ₹186 ಕೋಟಿ ಲಾಭವಾಗಿದೆ’ ಎಂದು ಆರೋಪ ಮಾಡಿದರು.

‘ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಿದೆ. ಶೇಕಡ 40ರಷ್ಷು ಕಮಿಷನ್‌ ಪಡೆಯುತ್ತಿರುವುದನ್ನು ಉಲ್ಲೇಖಿಸಿ ಗುತ್ತಿಗೆದಾರರು ರಾಷ್ಟ್ರಪತಿ ಅವರಿಗೆ ಪತ್ರ ಬರೆದಿದ್ದಾರೆ. ವ್ಯಾಪಾಕ ಭ್ರಷ್ಟಾಚಾರದ ಮೂಲಕ ಬಿಜೆಪಿ ರಾಜ್ಯದ ಘನತೆ ಗೌರವ ಮಣ್ಣುಪಾಲು ಮಾಡಿದೆ’ ಎಂದು ಹೇಳಿದರು.

ಟಿಕೆಟ್‌ಗೆ ಸರತಿ:

‘ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಸ್ಪರ್ಧಿಸಲು ಅನೇಕ ಜನ ಆಸಕ್ತಿ ತೋರಿಸುತ್ತಿದ್ದಾರೆ. ಪಕ್ಷದ ಟಿಕೆಟ್‌ಗಾಗಿ ಸರತಿಯಲ್ಲಿ ನಿಂತಿದ್ದಾರೆ. ಮುಖಂಡರಾದ ಸುಬ್ಬಾರೆಡ್ಡಿ, ಪ್ರವೀಣ ಹನಮಶೇಠ್, ಪಂಡಿತ ಚಿದ್ರಿ ಹೆಸರು ಮುಂಚೂಣಿಯಲ್ಲಿವೆ’ ಎಂದು ಖಂಡ್ರೆ ತಿಳಿಸಿದರು.

‘ಒಂದು ಸಿದ್ಧಾಂತ ಹಾಗೂ ತತ್ವದ ಆಧಾರದ ಮೇಲೆ ಕಾಂಗ್ರೆಸ್‌ನಲ್ಲಿ ಇದ್ದೇನೆ. ಕಾಂಗ್ರೆಸ್‌ ಬಿಟ್ಟು ಬೇರೆ ಪಕ್ಷಕ್ಕೆ ಹೋಗಲಾರೆ. ನಳೀನ್ ಕುಮಾರ್ ಕಟೀಲ್ ಬೇಕಿದ್ದರೆ ಕಾಂಗ್ರೆಸ್‌ ಸದಸ್ಯತ್ವಕ್ಕೆ ಅರ್ಜಿ ಹಾಕಲಿ ಪಕ್ಷದ ಸಮಿತಿಯಲ್ಲಿ ಪರಿಶೀಲಿಸಲಾಗುವುದು’ ಎಂದು ಪ್ರತಿಕ್ರಿಯಿಸಿದರು.