Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಭಾಲ್ಕಿ: ಪಟ್ಟಣದಲ್ಲಿ ರೈತ ಸಂಘದ (ಕೋಡಿಹಳ್ಳಿ ಬಣ) ಮುಖಂಡರು ಶುಕ್ರವಾರ ಜಿಲ್ಲೆಯ ನಾರಂಜಾ ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಪ್ರತಿ ಟನ್‍ ಕಬ್ಬಿಗೆ ಬಾಕಿ ₹450 ನೀಡುವಂತೆ ಒತ್ತಾಯಿಸಿ ತಮಟೆ ಬಾರಿಸಿ ಪ್ರತಿಭಟನೆ ನಡೆಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ ನೇತೃತ್ವದಲ್ಲಿ ಪಟ್ಟಣದ ಚನ್ನಬಸವಾಶ್ರಮದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ಅಂಬೇಡ್ಕರ್ ವೃತ್ತ, ಮಹಾತ್ಮ ಗಾಂಧಿ ವೃತ್ತದ ಮೂಲಕ ಕನಸೆ ಆಸ್ಪತ್ರೆಯ ರಸ್ತೆಯಿಂದ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಅವರ ಮನೆಯವರೆಗೂ ಸಾಗಿತು.

ರೈತರು ಅವರ ಮನೆಗೆ ಮುತ್ತಿಗೆ ಹಾಕಲು ಯತ್ನಿಸಿದರು. ಅವರ ಮನೆ ಸಮೀಪದ ರಸ್ತೆಯಲ್ಲಿ ಪೊಲೀಸರು ಬ್ಯಾರಿಕೇಡ್‌ ಅಳವಡಿಸಿ ಪ್ರತಿಭಟನಾ ನಿರತ ರೈತರನ್ನು ತಡೆದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಕಾರ್ಯಾಧ್ಯಕ್ಷ ಶ್ರೀಮಂತ ಬಿರಾದಾರ, ತಾಲ್ಲೂಕು ಘಟಕದ ಅಧ್ಯಕ್ಷ ಬಾಬುರಾವ್‌ ಜೋಳದಾಪಕೆ ಮಾತನಾಡಿ,’ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ನಾರಂಜಾ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಡಿ.ಕೆ.ಸಿದ್ರಾಮ ಅವರು ಜಿಲ್ಲೆಯ ಯಾವ ಸಕ್ಕರೆ ಕಾರ್ಖಾನೆ ಒಪ್ಪಲಿ, ಬಿಡಲಿ ತಾವು ನಾರಂಜಾ ಕಾರ್ಖಾನೆಗೆ ಕಬ್ಬು ಸಾಗಿಸಿದ ರೈತರ ಪ್ರತಿ ಟನ್ ₹2400 ನೀಡುವುದಾಗಿ ವಾಗ್ದಾನ ಮಾಡಿ ಈಗ ಅದರಿಂದ ನುಣಚಿಕೊಳ್ಳುವ ಪ್ರಯತ್ನ ಮಾಡುತ್ತಿರುವುದು ಸರಿಯಲ್ಲ’ ಎಂದು ಆಕ್ರೋಶ ಹೊರ ಹಾಕಿದರು.

ತಾವು ಮಾತು ಕೊಟ್ಟಂತೆ ಇನ್ನೂ ಪ್ರತಿ ಟನ್ ಕಬ್ಬಿಗೆ ಬಾಕಿ ₹450 ಹಣ ಆಯಾ ರೈತರಿಗೆ ಪಾವತಿಸಬೇಕು. ಇಲ್ಲದಿದ್ದರೇ ಬಾಕಿ ಹಣ ಕೊಡುವರೆಗೂ ರೈತರ ಹೋರಾಟ ಮುಂದುವರಿಯಲಿದೆ ಎಂದು ಎಚ್ಚರಿಕೆ ನೀಡಿದರು.

ಕಾರ್ಖಾನೆಯ ಅಧ್ಯಕ್ಷರ ಮನೆಗೆ ಮುತ್ತಿಗೆಗೆ ಯತ್ನಿಸಿದ ರೈತರನ್ನು ಪೊಲೀಸರು ವಶಕ್ಕೆ ಪಡೆದು ನಂತರ ಬಿಡುಗಡೆ ಮಾಡಿದರು.

ತಾಲ್ಲೂಕು ರೈತ ಸಂಘದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಿರಾದಾ, ಮುಖಂಡ ಶೇಷರಾವ ಕಣಜಿಕರ್ ಇದ್ದರು.