Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಇತಿಹಾಸ ಅನ್ನೋದು ದ್ವೇಷ ಬಿತ್ತುವ ಅಸ್ತ್ರ ಮತ್ತು ರಾಜಕೀಯ ಲಾಭದ ಸರಕಾಗಿ ಬದಲಾಗಿರೋದು ಈ ಶತಮಾನದ ದುರಂತ

“ಕಚ್ಚಾಡುವವರನೂ ಕೂಡಿಸಿ ಒಲಿಸು; ಸತ್ತಂತಿಹರನೂ ಬಡಿದೆಚ್ಚರಿಸು” ಕವಿವಾಣಿಯಂತೆ ಭಾಷಾಂಧತೆಯಲ್ಲಿ ಮುಳುಗಿರುವ ಎಂ.ಇ.ಎಸ್ ಅವರನ್ನ ತಿಳಿಹೇಳುವ ಮತ್ತು ರಾಜಕೀಯ ದುರಾಸಕ್ತಿಗೆ ಒಳಗಾಗಿ ಧಾಂದಲೆ ಮಾಡುವ ಮನಸ್ಥಿತಿಯಿಂದ ಕನ್ನಡಿಗರೊಂದಿಗೆ ಸುಖ ದುಃಖಗಳನ್ನು ಹಂಚಿಕೊಂಡು ಬದುಕುವ ಮನಸ್ಥಿತಿಯನ್ನ ಬಡಿದೆಚ್ಚರಿಸುವ ಕಾರ್ಯವನ್ನ ಮಾಡೋದು ಮರಾಠಿ ಪಂಡಿತರು,ಸಾಮಾಜಿಕ ಚಿಂತಕರು ಮಾಡಬೇಕಾಗಿತ್ತು ಆದರೆ ಅವರು ಕೂಡ ಮತಿಹೀನರಾಗಿ ರಾಜಕೀಯ ಹಿತಾಸಕ್ತಿಗಳ ಆಮಿಶಕ್ಕೋ ..? ಒತ್ತಡಕ್ಕೋ..? ಮಣಿದು ಇವತ್ತು ಈ ಪುಂಡರ ಗುಂಡಾಗಿರಿಗೆ ಮತ್ತಷ್ಟು ಎಣ್ಣೆ ಸುರಿಯುವಲ್ಲಿ ಅಸಕ್ತರಾಗಿದ್ದಾರೆ.

ಸತ್ಯವಲ್ಲದ್ದನ್ನ ಸತ್ಯವಾಗಿ,ಅಭಿಮಾನವಲ್ಲದ್ದನ್ನ ಅಭಿಮಾನವಾಗಿ,ಹೋರಾಟವಲ್ಲದ್ದನ್ನ ಹೋರಾಟವಾಗಿ ಜನರೆದುರ ಇಡುತ್ತಾ ಇದಕ್ಕೆ ಇತಿಹಾಸವನ್ನ ಬಳಸಿಕೊಂಡು ಅಸ್ತಿತ್ವ ಹುಟ್ಟುಹಾಕುವ ಪ್ರಯತ್ನಗಳು ಮಾಡುತ್ತಿದ್ದಾರೆ.ಇಂದು ಇತಿಹಾಸ ಅನ್ನೋದು ದ್ವೇಷ ಬಿತ್ತುವ ಅಸ್ತ್ರವಾಗಿ ಮತ್ತು ರಾಜಕೀಯ ಲಾಭದ ಸರಕಾಗಿ ಬದಲಾಗಿರೋದು ಈ ಶತಮಾನದ ದುರಂತ
ಬೆಳಗಾವಿ ಮಹಾರಾಷ್ಟ್ರದ್ದು ಅನ್ನೋ ಎಂ.ಇ.ಎಸ್ ಪುಂಡರ ಮಾತಿಗೆ ಕನ್ನಡ ಮತ್ತು ಮರಾಠಿ ಭಾಷಾ ಸಾಮರಸ್ಯ ಬಯಸೋ ಸ್ಥಳಿಯ ಮರಾಠಿ ಮನಸ್ಸುಗಳು ಬೆಳಗಾವಿ ನಮ್ಮೆಲ್ಲರದು ಅನ್ನೋ ಮನೋಭಾವ ಬೆಳೆಸಿಕೊಂಡು ಉತ್ತರ ಕೊಡುವುದು ಇಂದಿನ ಅನಿವಾರ್ಯವಾಗಿದೆ.

ಭಾರತದಲ್ಲಿ ಧರ್ಮ ಮತ್ತು ಭಾಷೆಯನ್ನ ಬಳಸಿಕೊಂಡು ಮಾಡುವ ನೀಚ ರಾಜಕಾರಣ ಹುಟ್ಟಿದ್ದೆ ಮಹಾರಾಷ್ಟ್ರ ನೆಲದಲ್ಲಿ, ಇವತ್ತು ಅದು ಸಂಪೂರ್ಣ ದೇಶದ್ಯಾಂತ ವ್ಯಾಪಿಸಿ ಅಟ್ಟಹಾಸ ಮೆರೆಯುತ್ತಿದೆ.ಉತ್ತರ ಭಾರತದಲ್ಲಿ ದೇವರು ಧರ್ಮಗಳನ್ನ ತಮ್ಮ ಸ್ವಾರ್ಥಕ್ಕೆ ಬಳಸಿಕೊಂಡು ರಾಜಕೀಯ ಅಧಿಕಾರ ಹಿಡಿಯುವ ದುರಾಲೋಚನೆಗಳು ಎಲ್ಲಾ ರಾಜಕೀಯ ಪಕ್ಷಗಳು ಮಾಡುತ್ತಿದೆ. ಇವರ ಈ ಆಟಕ್ಕೆ ಮುಗ್ಧ ಜನರ ಬದುಕು ಯಾತನದಾಯಕವಾಗಿ ಬಿಟ್ಟಿದೆ.ಒಂದಲ್ಲ ಒಂದು ರೀತಿಯ ಅಂಧತೆ ತುಂಬಿರುವ ಅದೆ ಮಾದರಿಯ ರಾಜಕಾರಣವನ್ನ ದಕ್ಷಿಣ ಭಾರತದಲ್ಲಿ ಹರಡುವ ಜವಾಬ್ದಾರಿ ಮಹಾರಾಷ್ಟ್ರದ ಧರ್ಮಾಂಧ,ಭಾಷಾಂಧ ರಾಜಕೀಯ ಪಕ್ಷಗಳು ಮತ್ತು ಅವುಗಳ ಮುಖವಾಣಿಯಾಗಿ ಕೆಲಸ ಮಾಡುತ್ತಿರುವ ಹಿಂಸಾ ಪ್ರವೃತ್ತಿಯ ಸಂಘಟನೆಗಳು ಪಡೆದುಕೊಂಡು ಎಲ್ಲಿಲ್ಲದ ಅನ್ಯಾಯ,ದೌರ್ಜನ್ಯಗಳು ಮಾಡೊದರ ಮೂಲಕ ಸಾಕಷ್ಟು ಹಾನಿಯುಂಟು ಮಾಡಿದೆ.

ಭಾರತದ ನೆಲದಲ್ಲಿ ಅದೆಷ್ಟು ಹೋರಾಟಗಳು ನಡೆದು ಹೋಗಿವೆ ನಡಿತಾ ಇವೆ, ಅದರಲ್ಲಿ ಕೆಲವೂ ಹೋರಾಟಗಳು ಚಳುವಳಿ ಅನ್ನೋ ಹೆಸರಿಗೆ ಕಳಂಕವಾಗಿ ಉಳಿದು ಬಿಟ್ಟಿವೆ.ಇತ್ತ ಕರ್ನಾಟಕದ ನೆಲವೂ ಅಸಂಖ್ಯಾತ ಹೋರಾಟಗಳು ಕಂಡಿದೆ ಕೆಲವಾರು ಸಂಘ,ಸಂಘಟನೆ,ಸಂಸ್ಥೆಗಳಿಂದ ಹೋರಾಟಗಳ ಹೆಸರಲ್ಲಿ ನಡೆಯುವ ಸಮಾಜಘಾತುಕ ಕೆಲಸಗಳು ನಡಿಸುತ್ತವೆ. ಅಂತಹ ಸಾಲಿನಲ್ಲಿ ಹಲವೂ ದಶಕಗಳ ನೀಚ ಶ್ರಮದಿಂದ ಕನ್ನಡನಾಡಿನಲ್ಲಿ ಮೊದಲ ಸ್ಥಾನ ಕಾಯ್ದುಕೊಂಡಿದ್ದು ಬೆಳಗಾವಿ ಕನ್ನಡಿಗರ ಬದುಕನ್ನ ಪ್ರತಿಕ್ಷಣ ಹದ್ದಿನಂತೆ ಕುಕ್ಕುತ್ತಿರುವ “ಮಹಾರಾಷ್ಟ್ರ ಏಕೀಕರಣ ಸಮಿತಿ” ಹೆಸರಿನ ಮರಾಠಿ ಭಾಷಾಂಧರ ಒಂದು ಕ್ಷುಲ್ಲಕ ಗುಂಪು.ಈ ಪುಂಡರ ಗುಂಪಿಗೆ ಸ್ವತಃ ಮಹಾ-ಸರ್ಕಾರವೆ ಬೆನ್ನ ಹಿಂದೆ ನಿಂತು ಪೋಷಿಸಿ ಪ್ರಚೋದಿಸುತ್ತಿರೊದು ದೊಡ್ಡ ದುರಂತವಾಗಿದೆ.

ಬೆಳಗಾವಿ ಮಣ್ಣಲ್ಲಿ ಇವರ ಹಿಂಸಾತ್ಮಕ ಹೆಜ್ಜೆಗಳದ್ದೆ ಹತ್ತತ್ರ 8 ದಶಕಗಳ ಕರಾಳ ಇತಿಹಾಸವಿದೆ.ಮರಾಠಿಗರ ಈ ಅರ್ಥಹೀನ ಘರ್ಷಣೆಗೆ ಈಗಾಗಲೇ ಎಲ್ಲಾ ತರದಲ್ಲೂ ಸೋಲುಂಟಾಗಿದೆ ಎಲ್ಲಿಗೆ ಹೋದರು ಖಾಲಿ ಕೈಲಿ ವಾಪಸ್ಸಾಗೋದು ಇವರಿಗೆ ಒಂದು ಖಾಯಂ ಕೆಲಸ.ಸೋತು ಸುಣ್ಣವಾಗಿರೋ ಕೆಲಸಕ್ಕೆ ಬಾರದ ಹೋರಾಟವನ್ನ ‘ಸಂಯುಕ್ತ ಮಹಾರಾಷ್ಟ್ರ ಝಾಲಾಚ ಪಾಹಿಜೆ’ ಅನ್ನೋದನ್ನೆ ಇವರು ಮಹಾರಾಷ್ಟ್ರ ಹಾಗೂ ಮರಾಠಿ ಭಾಷಾಭಿಮಾನ ಅಂದ್ಕೊಂಡು ಬಿಟ್ಟಿದ್ದಾರೆ.ಎಲ್ಲಾ ಕಡೆ ಮುಖಭಂಗವಾದರೂ ಇವರ ಭಂಡ ಧೈರ್ಯವೆಂದರೆ ಎಂದಿಗೂ ಇವರಿಗೆ ಸಿಗಲಾರದ ಬೆಳಗಾವಿ ನಮಗೆ ಬರುತ್ತೆ ಅನ್ನೋ ಹಗಲು ಕನಸನ್ನ ಇನ್ನೂ ಕಾಣುತ್ತಲೆ ಇದ್ದಾರೆ.ಇವರು ಹೇಳುವ ಯಾವ ಆಧಾರದ ಮೇಲೆಯೂ ಇವರ ಆಸೆಯಂತೆ ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರೋದು ಅಲ್ಲೆ ಇರಲಿ ಬೆಳಗಾವಿಯ ಒಂದಿಂಚು ಜಾಗ ಕೂಡ ಅವರಿಗೆ ಸಿಗೊದಿಲ್ಲ ಈಗಾಗಲೇ ಅವರು ಪ್ರಯತ್ನ ಮಾಡಿ ಮಾಡಿ ಹತಾಶೆಯುಂಟಾಗಿ ಮಾನಸಿಕ ಅಸ್ವಸ್ಥರಾಗಿ ಕನ್ನಡಿಗರ ಅಸ್ಮಿತೆಯಾಗಿರೋ ಸ್ವತಂತ್ರ ಸೇನಾನಿಗಳಾದ ಕಿತ್ತೂರಿನ ವೀರರಾಣಿ ಚೆನ್ನಮ್ಮಾ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಷ್ಟೆ ಅಲ್ಲದೆ ಇಡಿ ಮನುಕುಲದ ಮಾನವಿಯತೆ,ಸಮಾನತೆಯ ದ್ಯೂತಕವಾಗಿರುವ ವಿಶ್ವಗುರು ಬಸವಣ್ಣನವರ ಮೇಲೆ ವಿಕೃತಿ ಮೆರೆದು ಕನ್ನಡಿಗರನ್ನ ಕೆರಳಿಸುವ ಕೆಲಸದಲ್ಲಿ ತೊಡಗಿದ್ದಾರೆ.ಇವರನ್ನ ಹಣಿಯುವ ಎಲ್ಲಾ ಅಸ್ತ್ರಗಳು ಕನ್ನಡಿಗರ ಬತ್ತಳಿಕೆಯಲ್ಲಿವೆ ಆದರೂ ತಮ್ಮದೆಯಾದ ಸರ್ಕಾರ ತಮ್ಮವರಿಗಾಗಿ ಯಾವುದೇ ರೀತಿಯ ರಕ್ಷಣಾತ್ಮಕ ವಲಯವನ್ನ ಹುಟ್ಟಿಸುವಲ್ಲಿ ಆಸಕ್ತಿ ತೋರಿಲ್ಲ.

ಒಂದು ವೇಳೆ ಅಂತಹ ಆಸಕ್ತಿ ತೋರಿದರು ಅದು ಬರಿ ಅವರ ಸ್ವಯಂ ಹಿತಾಸಕ್ತಿಯೋ ಅಥವಾ ಕನ್ನಡಿಗರನ್ನ ಸಮಾಧಾನ ಪಡಿಸಲು ಮಾಡುವ ಪರಿಣಾಮಕಾರಿಯಲ್ಲದ ಕೆಲಸವಾಗಿರುತ್ತೆ.ಹಿಂದಿನಿಂದಲೂ ಇಂದಿನವರೆಗೂ ಯಾವ ಸರ್ಕಾರವಾಗಲಿ,ನಾಯಕರಾಗಲಿ ಕನ್ನಡಿಗರ ರಕ್ಷಣೆಗೆ ಧಾವಿಸಿಲ್ಲಾ ಅನ್ನೊದು ನೋವಿನ‌ ವಿಚಾರ ಕನ್ನಡಿಗರಿಗೆ ಅದ್ಯಾವ ಜನ್ಮದ ಶಾಪ ಅನ್ನುವ ಹಾಗೆ ಕಾಡ್ತಾ ಇದೆ ಎಂದರೂ ತಪ್ಪಾಗೋದಿಲ್ಲ.ಬೆಳಗಾವಿಯಲ್ಲಿ ಏನೆ ಘಟನೆ ಸಂಭವಿಸಿದರು ಅದಕ್ಕೆ ಮೊದಲು ಸ್ಪಂದಿಸಿ ಬೆಳಗಾವಿಯತ್ತ ಧಾವಿಸೋದು ನಾಡಿನಲ್ಲಿರುವ ಸಹೃದಯಿ ಕನ್ನಡದ ಮನಸ್ಸುಗಳು ಮತ್ತೆ ನಾಡಿನಾಚೆಗಿರುವ ಅನಿವಾಸಿ ಕನ್ನಡಿಗರು ಮಾತ್ರ.ಈ ವಿಚಾರದಲ್ಲಿ ಮರಾಠಿಗರು ಮತ್ತು ಕನ್ನಡಿಗರನ್ನ ಹೋಲಿಕೆ ಮಾಡಿದರೆ ಪ್ರತಿ ಕ್ಷಣದಲ್ಲು ಎಂ.ಇ.ಎಸ್ ಅವರ ದುಶ್ಕೃತ್ಯಗಳ ಜೊತೆಗೆ ಮಹಾರಾಷ್ಟ್ರ ಸರ್ಕಾರವಿದೆ ಅವರು ಮಾಡೋ ಪ್ರತಿ ತಪ್ಪುಗಳನ್ನ,ಹಾನಿಗಳನ್ನ ಮಹಾರಾಷ್ಟ್ರ ಪ್ರೇಮ ಅನ್ನೋ ರೀತಿಯಲ್ಲಿ ಬಿಂಬಿಸಿ ಪುಟಗಟ್ಟಲೆ ಬರೆದು ಪ್ರಕಟಿಸುವ ಪತ್ರಿಕೆಗಳು,ಸುದ್ದಿಮಾಧ್ಯಮಗಳಿದೆ,ದೊಡ್ಡ ದೊಡ್ಡ ಬರಹಗಾರಿದ್ದಾರೆ. ಬಹುತೇಕ ಅಲ್ಲಿನ ರಾಜಕಾರಣಿಗಳು ವೈಯಕ್ತಿಕವಾಗಿಯೂ ಎಂ.ಇ.ಎಸ್ ಅವರ ಈ ನೀಚ ಕೆಲಸಗಳನ್ನ ಮಹಾರಾಷ್ಟ್ರದ ಮೇಲಿನ ಅಭಿಮಾನ ಎಂದು ಸಮರ್ಥನೆ ಮಾಡಿಕೊಳ್ಳುವವರಿದ್ದಾರೆ.ಆದರೆ ಮರಾಠಿಗರ ದೌರ್ಜನ್ಯಕ್ಕೆ ಪ್ರತಿಯಾಗಿ ಅವರಂತೆ ದುರಳರ ಹಾಗೆ ವರ್ತಿಸದೆ ಸಂಯಮದಿಂದ ಪ್ರತಿಭಟಿಸುವ ಮೂಲಕ ಯಾರಿಗೂ ಯಾವ ಹಾನಿಯೂ ಮಾಡದ,ಯಾವ ತಪ್ಪು ಮಾಡದ ಕನ್ನಡಿಗರು ಈ ವಿಷಯದಲ್ಲಿ ದುರ್ದೈವಿಗಳು.ಎದುರಿನವರ ಕುತಂತ್ರಕ್ಕೆ ಬಲಿಯಾಗಿ ಸಮಸ್ಯೆಗೆ ಒಳಗಾಗುವ ಕನ್ನಡಪರರನ್ನ ನಮ್ಮ ಸರ್ಕಾರ ಹಿಂದೆ ಮುಂದೆ ವಿಚಾರ ಮಾಡದೆ ಇಲ್ಲಸಲ್ಲದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿ ಮತ್ತಷ್ಟು ಸಂಕಟಕ್ಕೆ ಸಿಲುಕಿಸುತ್ತೆ.

ಕನ್ನಡಿಗರಾಗಿ ಕನ್ನಡಿಗರ ಗಾಯದ ಮೇಲೆ ಉಪ್ಪು ಸವರುವ ಕೆಲಸವನ್ನ ಇತಿಹಾಸದುದ್ದಕ್ಕು ನಡಿಯುತ್ತಲೆ ಬಂದಿದೆ.ಬೆಳಗಾವಿ ಕನ್ನಡಿಗರ ವಿಷಯದಲ್ಲಂತು ಸ್ವತಂತ್ರ ಪೂರ್ವದಿಂದ ನಡೆದುಕೊಂಡು ಬಂದಿದೆ.ಇದಕ್ಕೆ ಸೂಕ್ತ ಉದಾಹರಣೆ ಎಂದರೆ ನಮ್ಮ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನನ್ನ ಕನ್ನಡಿಗನೆಯಾದ ಮಲ್ಲಪ್ಪಶೆಟ್ಟಿ ಎಂಬುವವನು ಮೋಸದಿಂದ ಬ್ರಿಟಿಷರಿಗೆ ಹಿಡಿದುಕೊಟ್ಟಿದ್ದು ಇದರಿಂದ ಭಾರತಕ್ಕೆ ಆದಂತಹ ಹಿನ್ನಡೆ ಸಣ್ಣಪುಟ್ಟದಲ್ಲ.ಇದು ಇತಿಹಾಸದಲ್ಲಿ ಕನ್ನಡಿಗರಿಗೆ ತಮ್ಮವರಿಂದಲೆ ಆಗಿರುವ ವಿಶ್ವಾಸದ್ರೋಹ ಎಂದಿಗೂ ಮರೆಯಲಾಗದ ಕೃತ್ಯವಾಗಿದೆ.ಬಹುತೇಕ ಪತ್ರಿಕೆಯವರು ಕನ್ನಡಿಗರ ಪ್ರತಿಯೊಂದು ಹೋರಾಟ,ಪ್ರತಿಭಟನೆಗಳನ್ನು ಬಹಳ ಲಘುವಾಗಿ ಕಾಣೋದು,ಕನ್ನಡಿಗರ ಹೋರಾಟಗಳಿಗೆ ಬೆನ್ನೆಲುಬಾಗಿ ನಿಂತು ಸುದ್ದಿಗಳನ್ನ ಪ್ರಕಟಿಸುವ ಮೂಲಕ ಶಕ್ತಿ ತುಂಬುವುದು ಬಿಟ್ಟು ಹೋರಾಟಗಳನ್ನೆ‌ ಅಲ್ಲಗಳೆದು ತಮ್ಮ ಕರ್ತವ್ಯದಲ್ಲಿಯೂ ಉದಾಸೀನತೆ ತೋರೋದು ನಿರಂತರವಾಗಿ ಚಳುವಳಿಯುದ್ದಕ್ಕು ನಡಿತಾ ಬಂದಿರುವುದು ಇನ್ನೊಂದು ದುರಂತ.

ಇನ್ನೂ ಒಂದು ಗುಂಪು ಸದಾ ಕನ್ನಡಪರರ ಭಾಷಾಭಿಮಾನವೇ ತಪ್ಪು ಅನ್ನೋ ರೀತಿಯಲ್ಲಿ ವರ್ತಿಸುತ್ತದೆ ಆದರೆ ಮರಾಠಿಗರು ಮಾಡುವ ದೌರ್ಜನ್ಯಗಳ ಬಗ್ಗೆ ಮಾತಾಡುವಾಗ ಅವರ ನಾಲಿಗೆ ಹೊರಳೊದಿಲ್ಲ.ರಾಯಣ್ಣನಿಗೆ ಆದ ಅವಮಾನ ಅವರಿಗೆ ಕಾಣೊದಿಲ್ಲ,ಕನ್ನಡಿಗರ ನೋವು,ಕಷ್ಟ, ನಷ್ಟ ಅವರಿಗೆ ಯಾವ ತರದಲ್ಲು ಸಮಸ್ಯೆ ಅನಿಸೋದಿಲ್ಲ ಆದರು ಕನ್ನಡಪರ ಸಂಘಟನೆಯವರನ್ನ ಸದಾ ನೀವು ಮಾಡುತ್ತಿರುವುದು ತಪ್ಪು ಎಂದು ಹೇಳಲು ಮಾತ್ರ ಅವರು ಮರೆಯೊದಿಲ್ಲ.ಎಂ.ಇ.ಎಸ್ ಪುಂಡರು ಮತ್ತೆ ಈ ಒಂದು ಕನ್ನಡದವರದ್ದೆಯಾದ ಕನ್ನಡ ವಿರೋಧಿ ಗುಂಪು ಇವೆರಡು ಕೂಡ ನಾಡು-ನುಡಿ,ನೆಲ-ಜಲ ಸಂಸ್ಕೃತಿಗೆ ದೊಡ್ಡ ಶತ್ರುಗಳು ಅನ್ನೋದು ಎಲ್ಲರಿಗೂ ಮನವರಿಕೆಯಾಗಬೇಕಿದೆ.ಕನ್ನಡಿಗರು ಮಾಡೊದೆಲ್ಲವೂ ತಪ್ಪು ಮರಾಠಿಗರೆಲ್ಲವೂ ಮಾಡೋದನ್ನ ಪರೋಕ್ಷವಾಗಿ ಸಮರ್ಥಿಸುವ ಜನಪ್ರತಿನಿಧಿಗಳ ಒಂದು ನಾಡದ್ರೋಹಿ ಗುಂಪು ಎಲ್ಲಾ ರಾಜಕೀಯ ಪಕ್ಷದಲ್ಲಿಯೂ ಇದೆ ಇವರ ಮುಖವಾಡವನ್ನ ಈಗಾಗಲೆ ಕನ್ನಡಿಗರು ನೋಡಿದ್ದಾರೆ. ಇವರ ಬಗ್ಗೆ ಮಾತಾಡೋದೆ ಒಂದು ಅಸಹ್ಯ.ಈ ನಾಡಿನ ಪ್ರತಿಯೊಂದು ಪ್ರದೇಶವೂ ತನ್ನದೆಯಾದ ಹೋರಾಟದ ಇತಿಹಾಸವನ್ನ ಇಟ್ಟುಕೊಂಡು ಇಂದು ಅಖಂಡ ಕನ್ನಡನಾಡಾಗಿ ನಿಂತಿದೆ.

ಪ್ರತಿರೋಧ ಅನ್ನೋದು ಯಾವ ನೆಲದಲ್ಲಿ ಜೀವಂತ ಇರುತ್ತೋ ಆ ನೆಲ ಯಾವತ್ತಿಗೂ ಅನ್ಯಾಯ ಅನುಭವಿಸೋದಿಲ್ಲ ನಮ್ಮ ಮಣ್ಣಲ್ಲಿ ಪ್ರತಿರೋಧದ ಗುಣವೂ ಮುಗಿದು ಹೋಗಿದೆ ಅನ್ನೋ ಅನುಮಾನ ಕಾಡುತ್ತಲೇ ಇದೆ.ಒಂದು ವೇಳೆ ಆ ಗುಣ ಇದ್ದಿದ್ದೆಯಾದರೆ ಇವತ್ತು ಒಗ್ಗಟ್ಟಿನ ಕೊರತೆಯುಂಟಾಗಲು ಸಾಧ್ಯವೇ ಇರುತ್ತಿರಲಿಲ್ಲಾ…? ಆದರೂ ಅಲ್ಲಲ್ಲಿ ಆ ಗುಣವಿರೋ ಕನ್ನಡಿಗರು ಇರೋದು ಸಮಧಾನದ ಸಂಗತಿಯಾಗಿದೆ.ಹಾಗಾಗಿ ಬೆಳಗಾವಿಯ ಮೇಲೆ ರಣಹದ್ದಿನಂತೆ ಹಾರಾಡಿ ಕುಕ್ಕುವ ಎಂ.ಇ.ಎಸ್ಸಿನ ಮರಾಠಿ ಪುಂಡರಿಗೆ ಬೆಳಗಾವಿ ಮಹಾರಾಷ್ಟ್ರದ್ದೆ ಅನ್ನೊದು ಮರಿಚೀಕೆಯಾಗಿಯೇ ಉಳಿದು ಬಿಟ್ಟಿದೆ.

ನಮ್ಮ ಬೆಳಗಾವಿ ಜಿಲ್ಲೆಯು ಎದೆಂದಿಗೂ ನಮ್ಮ ಕರ್ನಾಟಕದ ಅವಿಭಾಜ್ಯ ಅಂಗವಾಗಿದ್ದು ಅದನ್ನ ಎಷ್ಟೆ ಪ್ರಯತ್ನಗಳು ಮಾಡಿದರು ಮಹಾರಾಷ್ಟ್ರಕ್ಕೆ ಸೇರಿಸಿಕೊಳ್ಳಲು ಆಗೋದಿಲ್ಲ ಯಾಕೆಂದರೆ ಈಗಾಗಲೇ ಸುಮಾರು ದಶಕಗಳಿಂದ ಮಾಡಬಾರದ ರೀತಿಯಲ್ಲಿ ಹೋರಾಟ ಅನ್ನೋದರ ಹೆಸರಲ್ಲಿ ಕ್ಷಣ ಕ್ಷಣಕ್ಕು ಕನ್ನಡಿಗರ ಮೇಲೆ ದೌರ್ಜನ್ಯ ಮಾಡಿದೆ ಮಹಾರಾಷ್ಟ್ರ ಏಕೀಕರಣ ಸಮಿತಿ ಇವರು ಮಾಡೋ ಸತತ ಪುಂಡಾಟಿಕೆಗಳ ಬೆಂಕಿಯಲ್ಲಿ ಬೆಂದು,ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಎದುರಿಸಿ ಇವತ್ತು ಬೆಳಗಾವಿ ಅನ್ನೋದು ಅಪ್ಪಟ ಚಿನ್ನದಂತೆ ಹೊಳೆಯುತ್ತಿದೆ.ಯಾಕೆಂದರೆ ಇವರು ಧಾಂದಲೆ ಮಾಡಿದಾಗೊಮ್ಮೆ ಕನ್ನಡಿಗರ ನಾಡಾಭಿಮಾನ ಜಾಗೃತಗೊಂಡು ಮತ್ತಷ್ಟು ಉತ್ಕಟವಾಗುತ್ತಿದೆ.ನಿರಾಭಿಮಾನಿ ಕನ್ನಡಿಗರಿಗೆ ತನ್ನ ಆತ್ಮಸಾಕ್ಷಿ ಬಡಿದೆಬ್ಬಿಸಿ ಈ ಪುಂಡರ ಅಟ್ಟಹಾಸವನ್ನ ಹಣಿಯಲು ಸಂಘಟಿತರಾಗಲು ಪ್ರೇರೆಪಿಸುತ್ತಿದೆ.

ಕ್ರಿ.ಶ ೧೧೬೦ ರ ಕದಂಬ ಶಾಸನದಲ್ಲಿ ಬೆಳಗಾವಿ ‘ವೇಣುಗ್ರಾಮ ಎಳ್ಪತ್ತರ ನಾಡು’ ಎಂದು ಉಲ್ಲೇಖಿಸಲಾಗಿದೆ.ಐತಿಹಾಸಿಕವಾಗಿ ಬೆಳಗಾವಿಯೂ ಕನ್ನಡ ನಾಡಿನದ್ದೆ ಅನ್ನೋದಕ್ಕೆ ಯಾರೂ ಅಳಿಸಲಾರದಷ್ಟು ಸಾಕ್ಷಾಧಾರಗಳಿವೆ.ಮಹಾರಾಷ್ಟ್ರದ ಮಣ್ಣು ಅಗೆದಷ್ಟು ಕನ್ನಡದ ಬೇರುಗಳು ಅಲ್ಲಿ ಆಳವಾಗಿ ಗಟ್ಟಿಯಾಗಿ ಬೇರೂರಿದೆ.ಬೆಳಗಾವಿಯೂ ಇಂತಹ ಆಳವಾದ ಐತಿಹಾಸಿಕ ಬೇರುಗಳು ಹೊಂದಿದ್ದು ಕನ್ನಡ ನಾಡಿನ ಮಣ್ಣಲ್ಲೆ ಅನ್ನೋದು ಜಗತ್ಜಾಹಿರಾದ ಮಾತು.ಇದು ಇವತ್ತು ಎಂ.ಇ‌.ಎಸ್ ಅನ್ನೋ ಪುಂಡಾಟಿಕೆ ಗುಂಪಿನ ಪ್ರತಿಯೊಬ್ಬರಿಗೂ ತಿಳಿದಿದೆ.ಅಷ್ಟೆ ಏಕೆ ಮಹಾರಾಷ್ಟ್ರದ ಹಲವಾರು ಇತಿಹಾಸಕಾರರು,ಸಂಶೋಧಕರು,ನ್ಯಾಯವಾದಿಗಳು,ಮಹಾರಾಷ್ಟ್ರದ ಹಿರಿಯ ಹೋರಾಟಗಾರರಿಗೆ ಗೊತ್ತಿರುವ ವಿಷಯವೇ ಆಗಿದೆ.ಅದೆಷ್ಟೋ ಸಲ ಖುದ್ದಾಗಿ ಹಲವಾರು ಇತಿಹಾಸ ಸಂಶೋಧಕರು ಬೆಳಗಾವಿಯು ಕರ್ನಾಟಕದ್ದೆ ಎಂದು ಸ್ಪಷ್ಟವಾಗಿ ಹೇಳಿದ್ದಾರೆ ಹಲವಾರು ಪುಸ್ತಕಗಳಲ್ಲಿ ದಾಖಲೆಗಳ ಸಮೆತ ಬರೆದಿದ್ದಾರೆ‌‌‌‌.ಇದೆಲ್ಲವೂ ಮಹಾರಾಷ್ಟ್ರ ಏಕೀಕರಣ ಸಮಿತಿಯ ಮಹಾ ಪುಂಡರಿಗೆ ತಿಳಿದು ತಿಳಿಲಾರದ ಹಾಗೆ ಮಾಡ್ತಾ ಇರೋದರ ಹಿಂದಿನ ಕಾರಣವೆನೆಂದು ಇವತ್ತು ರಹಸ್ಯವಾಗಿ ಉಳಿದಿಲ್ಲ.ಅವರು ಒಂದಲ್ಲ ಒಂದು ರೀತಿಯಲ್ಲಿ ರಾಜಕೀಯ ಮಹತ್ವಕಾಂಕ್ಷೆ ಉಳ್ಳವರು ಮತ್ತು ಹಿಂಸಾಪ್ರವೃತ್ತಿಯುಳ್ಳ ಮನಸ್ಥಿತಿಯವರು.

ಬೆಳಗಾವಿಯೂ ಒಂದು ಕ್ಷಣ ಶಾಂತವಾಗಿ ನೆಮ್ಮದಿಯಾಗಿ ಕನ್ನಡಿಗರು ಮತ್ತು ಮರಾಠಿಗರು ಬದುಕುವ ವಾತಾವರಣ ಸೃಷ್ಟಿಯಾದರೆ ಸಾಕು ಇವರಿಗೆ ಅದನ್ನ ಹಾಳು ಮಾಡುವ ವರೆಗೂ ಸಮಾಧಾನ ಆಗೋದಿಲ್ಲ ಯಾಕೆಂದರೆ ಅದು ಅವರ ರಾಜಕೀಯ ಅಸ್ತಿತ್ವದ ಪ್ರಶ್ನೆ.ಇಡಿ ರಾಜ್ಯದಲ್ಲೆ ಬೆಳಗಾವಿಯು ಹೋರಾಟದ ಕೇಂದ್ರವಿದ್ದಂತೆ ಯಾಕೆಂದರೆ ವರ್ಶವಿಡಿ ಒಂದಲ್ಲ ಒಂದು ರೀತಿಯ ಏನಾದರು ಇದ್ದದೆ.ಇವತ್ತಿನ ಈ ವಿದ್ಯಾಮಾನಗಳನ್ನ ನೋಡ್ತಾ ಇದ್ದರೆ ಎಂ.ಇ.ಎಸ್ ಅವರ ಹೋರಾಟ ಅರ್ಥಾತ್ ಪುಂಡಾಟಿಕೆಯ ಗಾಂಭಿರ್ಯತೆ ಮತ್ತು ಉದ್ದೇಶ ಎರಡು ತನ್ನ ಅಸ್ತಿತ್ವ ಕಳೆದುಕೊಂಡು ಬಿಟ್ಟಿದೆ.ಇವರು ಮೊದಲಿಂದಲೂ ದಾರಿ ತಪ್ಪಿದವರು ಈಗ ತಪ್ಪುಗಳ ದಾರಿಗಳನ್ನೆ ತುಳಿತಾ ಇದ್ದಾರೆ.ಕಳೆದ ೮ ದಶಕಗಳಿಂದ ಕನ್ನಡಿಗರು “ಬೆಳಗಾವಿ ಗಡಿ ವಿವಾದ” ಅನ್ನೋ ಕಂಟಕದಲ್ಲಿ ಸಿಲುಕಿ ಲೆಕ್ಕಕ್ಕೆ ನಿಲುಕದಷ್ಟು ಕಷ್ಟ ನಷ್ಟಗಳನ್ನ ಅನುಭವಿಸ್ತಾ ಬಂದಿದ್ದಾರೆ.ಮರಾಠಿಗರು ಬದಲಾಗಿ ತಮ್ಮೊಂದಿಗೆ ಸಹಬಾಳ್ವೆ ನಡೆಸಬಹುದೆಂಬ ಧೃಡ ನಂಬಿಕೆಯೊಂದಿಗೆ ಆಶಾಭಾವದಿಂದ ಕನ್ನಡಿಗರು ಅವರ ಪುಂಡಾಟಿಕೆ,ದೊಂಬಿಗಳಿಗೆ ಪ್ರತಿಯಾಗಿ ಸಹಜ ಪ್ರತಿರೋಧ ಅಷ್ಟೆ ಒಡ್ಡುತ್ತಾ ಬಂದಿದ್ದಾರೆ ಹೊರತು ಅವರಂತೆಯೆ ಹಿಂಸೆಗಳು ಮಾಡಲಿಲ್ಲಾ.ಯಾರಿಗೂ ನಷ್ಟ ಮಾಡಲಿಲ್ಲಾ ಸರ್ಕಾರ ಹೊರಡಿಸಿರೋ ಆದೇಶಗಳು,ಹೇರಿರುವ ನಿರ್ಭಂಧಗಳು ಮುರಿಯಲಿಲ್ಲ,ನಿಷೇಧಾಜ್ನೆಗಳು ಮೀರಲಿಲ್ಲಾ,ಪ್ರತಿಭಟನಾ ನಿರತ ಕನ್ನಡಿಗರನ್ನ ಪೋಲಿಸರು ಎಳ್ಕೊಂಡು ಹೋಗುವಾಗ ಮೌನವಾಗೆ ಸಹಕರಿಸಿದರು.

೧೯೨೫ ರಿಂದಲೇ ಬೆಳಗಾವಿಯಲ್ಲಿ ಕನ್ನಡ ಸಾಹಿತ್ಯ ಸಮ್ಮೆಳನ ಮಾಡುವ ಮಹತ್ಕಾರ್ಯವನ್ನು ಕನ್ನಡಿಗರು ಆರಂಭಿಸಿದರು ಅಲ್ಲಿಂದ ಶುರುವಾದ ಸಾಹಿತ್ಯ,ಪತ್ರಿಕೆ,ಸಭೆ,ಸಮಾರಂಭಗಳು ಕನ್ನಡಿಗರ ಮನದಲ್ಲಿ ಒಂದು ಸೂಪ್ತ ಕನ್ನಡದ ಭಾವನೆಯನ್ನ ಜಾಗೃತಗೊಳಿಸುತ್ತಾ ಬಂದವೂ.ಅದಕ್ಕೆ ಪ್ರತಿಯಾಗಿ ೧೯೨೯ ರಲ್ಲಿ ಮರಾಠಿ ಸಾಹಿತ್ಯ ಸಮ್ಮೆಳನ ಮಾಡಲು ಮರಾಠಿಗರು ಮುಂದಾಗಿದ್ದರು ಅವರ ದುರುದ್ದೇಶ ಅರಿತ ಕನ್ನಡಿಗರು ಅದನ್ನ ತಡೆದರು ಆದರೆ ಅವರು ಇದು ಸಾಹಿತ್ಯಕ ಸಮ್ಮೆಳನವಾಗಿದ್ದು ಇಲ್ಲಿ ಯಾವುದೇ ರೀತಿಯಲ್ಲಿ ಬೆಳಗಾವಿ ಮಹಾರಾಷ್ಟ್ರದ್ದು ಅಂತಹ ಯಾವುದೇ ವಿಷಯಗಳು ಚರ್ಚಿಸೋದಕ್ಕೆ ಮಾಡ್ತಾ ಇರುವ ಸಮ್ಮೆಳನವಲ್ಲ “ಬೆಳಗಾವಿ ಕರ್ನಾಟಕದ್ದೆ ಅದನ್ನ ಯಾವ ಕಾರಣಕ್ಕು ಮರೆಯಲಾಗದು” ಎಂದು ಬಾಲಗಂಗಾಧರ್ ತಿಲಕ್ ಅವರ ಆಪ್ತರಾಗಿದ್ದ ಚಿ.ನಂ ಕೇಳಕರ್ ಅವರು ಸ್ಪಷ್ಟವಾಗಿ ಹೇಳಿ ಕನ್ನಡಿಗರು ಈ ಸಾಹಿತ್ಯಕ ಚಟುವಟಿಕೆ ತಡೆಯಬಾರದು ಎಂದು ಕೇಳಿಕೊಂಡಿದ್ದರು.ಆದರೆ ಆ ಸಮ್ಮೇಳನದ ಅಸಲಿ ಉದ್ದೇಶಗಳೆ ಬೇರೆಯಾಗಿದವೂ ಅನ್ನೋದು ತದನಂತರ ಗಮನಕ್ಕೆ ಬಂದ ವಿಷಯ.ಅಲ್ಲಿಂದ ಮುಂದಿನ ಒಂದು ದಶಕದ್ಯಾಂತ ಕನ್ನಡಿಗರ ಮೇಲೆ ಎಂ.ಇ.ಎಸ್ಸಿನ ಮರಾಠಿ ಭಾಷಾಂಧರು ಮಾಡಿದ ದೌರ್ಜನ್ಯ,ಹಾನಿಗಳಿಗೆ ಲೆಕ್ಕವಿಲ್ಲ ಅಲ್ಲಿಯವರೆಗೆ ಕನ್ನಡಿಗರು ಇವರಿಗೆ ಸರಿಯಾದ ರೀತಿಯಲ್ಲಿ ಪ್ರತಿರೋಧ ಒಡ್ಡುತ್ತಲೆ ಬರುತ್ತಿದ್ದರು. ಅಷ್ಟು ಪರಿಣಾಮಕಾರಿಯಾಗಿರಲಿಲ್ಲಾ ಆದರೆ ಅಸಲಿಗೆ ಕನ್ನಡದ ಚಳುವಳಿ ಪ್ರಾರಂಭವಾಗಿದ್ದು ೧೯೪೪ ರಲ್ಲಿ ಎನ್ನಬಹುದು ಅಲ್ಲಿವರೆಗೆ ೧೯೪೨ ರಿಂದ ೪೪ ರ ವರೆಗೆ ಅದು ಸುಪ್ತವಾಗಿತ್ತು.ಯಾಕೆಂದರೆ ಅಲ್ಲಿಯವವರೆಗೆ ಮರಾಠಿಗರು ಕಾಂಗ್ರೆಸ್ಸಿನೊಳಗೆ,ವಿಧ್ಯಾರ್ಥಿ ಸಂಘದೊಳಗೆ,ಸೇವಾದಳದಲ್ಲಿ ತಮ್ಮ ಪ್ರಭಾವ ಬೆಳಸಿಕೊಂಡು ಮನಬಂದಂತೆ ನಡೆದುಕೊಳ್ಳುತ್ತಿದ್ದರು.

ಇದನೆಲ್ಲಾ ಅವರದ್ದೆ ಮಾದರಿಯಲ್ಲಿ ಎದುರಿಸಿ ಕನ್ನಡಿಗರು ಯಶಸ್ವಿಯಾಗಿದ್ದು ಮರಾಠಿಗರಿಗೆ ಭಾರಿ ದೊಡ್ಡ ಪೆಟ್ಟುಕೊಟ್ಟಿತು.ಈ ಸೋಲು ತಡೆದುಕೊಳ್ಳಲಾಗದೆ ಇವರ ಪುಂಡಾಟಿಕೆ ಎಗ್ಗಿಲ್ಲದೆ ನಡಿತಲೆ ಇತ್ತು ಅದಕ್ಕೆ ಬೇಕಾದ ರೀತಿಯಲ್ಲಿ ಪ್ರಚೋದಿಸೋಕೆ ಮಹಾರಾಷ್ಟ್ರದಲ್ಲಿರುವ ಮಾರ್ಗದರ್ಶಕ ಮಂಡಳಿ ಹಾಗೂ ಇವರು ಮಾಡೋ ದೌರ್ಜನ್ಯಗಳನ್ನ ಸಮರ್ಥಿಸಿ ಮತ್ತಷ್ಟು ಎತ್ತಿ ಕಟ್ಟೊ ಪತ್ರಿಕೆಗಳು.ಬೆಳಗಾವಿಯಲ್ಲಿ ದುಷ್ಟ ಎಂ.ಇ.ಎಸ್ ಅವರು ಮಾಡಿರೋ ಮಾಡುತ್ತಿರೋ ಪ್ರತಿಯೊಂದು ಸಣ್ಣ-ದೊಡ್ಡ ಯಾವುದೇ ತರದ ಗಲಭೆ,ಗಲಾಟೆ ಕಲ್ಲು ತೂರಾಟಕ್ಕೆ ನೇರ ಹೊ‌ಣೆ ಮರಾಠಿ ಪತ್ರಿಕೆಗಳು ಅದರಲ್ಲಿ ವಿಶೇಷವಾಗಿ ತರುಣ್ ಭಾರತ್ ಅನ್ನೋ ಪತ್ರಿಕೆಯದೆ ಸಿಂಹಪಾಲು ಈ ಪತ್ರಿಕೆ ಇಲ್ಲಿವರೆಗೂ ತನ್ನ ದ್ವೇಷದ ಮನಸ್ಥಿತಿಯನ್ನ ಮಹಾರಾಷ್ಟ್ರದ ಮೇಲಿನ ಪ್ರೇಮ ಅನ್ನೋ ರೀತಿಯಲ್ಲಿ ತೋರಿಸಿಕೊಂಡು ವಿವಾದಗಳಿಗೆ ಎಣ್ಣೆ ಸುರಿತಾನೆ ಬರ್ತಾ ಇದೆ.ನಮ್ಮ ಕನ್ನಡನಾಡಿನ ಬೆಳಗಾವಿ ಪಟ್ಟಣದಲ್ಲಿ ೧೯೨೯ ರ ಸುಮಾರಿಗೆ “ಸಂಯುಕ್ತ ಕರ್ನಾಟಕ” ದಿನಪತ್ರಿಕೆಯು ಹುಟ್ಟಿಕೊಂಡಿತ್ತು ಅದು ಕನ್ನಡಿಗರ ನೋವು,ಹೋರಾಟ,ಬದುಕಿನ ಒಳಧ್ವನಿಯ ಅಭಿವ್ಯಕ್ತಿಯಾಗಿ ಸಮಾಜದ ಮುಂದಿಟ್ಟು ಕನ್ನಡಿಗರನ್ನ ಜಾಗೃತಗೊಳಿಸುವ ಪ್ರತಿನಿಧಿಯಂತೆ ಕೆಲಸ ಮಾಡ್ತಾ ಇತ್ತು.ಅದೆ ಸಂದರ್ಭದಲ್ಲಿ ಬೆಳಗಾವಿ ಮಣ್ಣಲ್ಲಿ ವಿವಾದ ಅನ್ನೋ ಬೀಜ ಬಿತ್ತು ಅದರ ಹೆಸರು “ತರುಣ್ ಭಾರತ್” ಅನ್ನೋ ಪತ್ರಿಕೆಯ ರೂಪದಲ್ಲಿ ಮೊಳಕೆ ಒಡೆಯಿತು ಇದು ಮಹಾರಾಷ್ಟ್ರ ಏಕೀಕರಣ ಸಮಿತಿಯ ಮುಖವಾಣಿಯಾಗಿ ಕೆಲಸ ಮಾಡತೊಡಗಿತು.ಈ ಪತ್ರಿಕೆಯ ಸಂಸ್ಥಾಪಕರು ಹಾಗೂ ಸಂಪಾದಕರಾಗಿ ನೀರೆರೆದು ದೊಡ್ಡದಾಗಿಸಿದವರು ಶ್ರೀಯುತ ‘ಬಾಬುರಾವ್ ಠಾಕೂರ್’ ಅನ್ನೋ ಮರಾಠಿ ವ್ಯಾಮೋಹಿ.ಮೊದಲಿಗೆ ಉಭಯ ಭಾಷೆಗಳಲ್ಲಿ ಪ್ರಕಟಗೊಳ್ಳುತ್ತಿದ್ದ ಪತ್ರಿಕೆಯು ಮುಂದಿನ ದಿನಗಳಲ್ಲಿ ಮಹಾರಾಷ್ಟ್ರಿಯ ಪ್ರಜ್ಞೆಯತ್ತ ವಾಲಿತ್ತು.ಮುಂದೆ ಆ ಮರಾಠಿ ಪ್ರಜ್ಞೆಯೇ ಎಂ.ಇ.ಎಸ್ ಅನ್ನೋ ನಾಡದ್ರೋಹಿ ಗುಂಪಿಗೆ ದೊಡ್ಡ ಶಕ್ತಿಯಾಗಿ ಬೆನ್ನಿಗೆ ನಿಂತು ಗುಂಡಾಗಿರಿ ಮಾಡುವಂತೆ ಪ್ರಚೋದಿಸುತ್ತಿದೆ.ಭಾಷಾವಾರು ಪ್ರಾಂತಗಳ ರಚನೆಯಾದಗಿಂದ ಬೆಳಗಾವಿಯಲ್ಲಿ ಆಗಿರುವ ಘಟನೆಗಳು ನೋಡಿದರೆ ಭಾರತ ಸರ್ಕಾರದ ಯಾವುದೇ ಆಯೋಗ,ನೀತಿ,ನಿರ್ಧಾರ,ಕಾನೂನಿನ ತೀರ್ಪುಗಳಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲದಂತೆ ಈ ಮರಾಠಿ ಪುಂಡರು ನಡೆದುಕೊಂಡಿದ್ದಾರೆ.ಕನ್ನಡಿಗರ ಮೇಲೆ ಕಲ್ಲು ತೂರಾಟ ಮಾಡೋದು,ಇವರ ಮನೆಗಳ ಮೇಲೆ ಕಲ್ಲು ತೂರಾಟ ಮಾಡೋದು,ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚೋದು,ಕನ್ನಡಿಗರಿಗೆ ಸಂಬಂಧಿಸಿದ ಮೋಟಾರು,ವಾಹನಗಳು,ಹೊಟೆಲ್ಗಳ ಮೇಲೆ ದಾಳಿ ಮಾಡಿ ಧ್ವಂಸಗೊಳಿಸೋದು ಅಷ್ಟೆ ಅಲ್ಲದೆ ‘ಹಾಲಗಿ’ ಅನ್ನೋ ಗ್ರಾಮದಲ್ಲಿ ಕನ್ನಡದ ಮಹಿಳೆಯರ ಮೇಲೆ ಅತ್ಯಚಾರಗಳನ್ನು ಸಹ ಮಾಡಿದ್ದು,ಕನ್ನಡಿಗರ ಆಯೋಜಿಸುವ ಸಭೆ ಸಮಾರಂಭಗಳಲ್ಲಿ ಹೋಗಿ ಧಾಂದಲೆ ಮಾಡೋದು,ಕನ್ನಡದ ದಿನಪತ್ರಿಕೆಗಳನ್ನ ಸುಟ್ಟು ಹಾಕೋದು,ಕನ್ನಡಪರ ಸಂಘಟನೆಗಳ ಕಛೇರಿಗಳಿಗೆ ನುಗ್ಗಿ ಅಲ್ಲಿರುವ ವಸ್ತುಗಳನ್ನು ಪುಡಿ ಪುಡಿ ಮಾಡಿ ನಾಯಕರ ಮೇಲೆ ಹಲ್ಲೆ ಮಾಡೋದು ೧೯೪೩-೪೪ ರಿಂದ ಇವರ ದಿನಚರಿಯ ಒಂದು ಭಾಗವೇ ಆಗಿದೆ ಈ ಧೊಂಬಿ ಗಲಾಟೆಗಳನ್ನ ಹೋರಾಟ ಅನ್ನೋ ಹೆಸರಲ್ಲಿ ಮಾಡದೆ ಹೋದರೆ ಅವರ ರಾಜಕೀಯ ಬೇಳೆ ಬೇಯೊದಿಲ್ಲ ಅನ್ನೋದು ಪದೆ ಪದೆ ಸಾಭೀತು ಮಾಡುತ್ತಲೆ ಬರುತ್ತಿದ್ದಾರೆ.ಇವರ ಸ್ವಾರ್ಥದ ಕಿಚ್ಚು ಮತ್ತಷ್ಟು ವ್ಯಾಘ್ರವಾಗಿದ್ದು ಭಾರತ ಸರ್ಕಾರವು ೧೯೫೩ ರಲ್ಲಿ ಒಡಿಸ್ಸಾದ ರಾಜ್ಯಪಾಲರಾಗಿದ್ದ ಫಜಲ್ ಅಲಿ ಅವರ ನೇತೃತ್ವದಲ್ಲಿ ‘ರಾಜ್ಯಗಳ ಪುನರಚನಾ ಆಯೋಗ’ ವನ್ನು ನೇಮಿಸಿತು ಅಂದಿನ ಈ ಆಯೋಗದ ಮುಂದೆ ಮರಾಠಿಗರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಿಸಲು ಸಾಕಷ್ಟು ಸರ್ಕಸ್ಸು ಮಾಡಿದ್ದರು ಸಹ ಅವರ ಇಚ್ಛೆಯಂತೆ ಫಲಿತಾಂಶವಿರಲಿಲ್ಲಾ.ಫಜಲ್ ಅಲಿ ಆಯೋಗವು ೧೯೫೪ ರ ಜೂನ್ ೨೧ ರಂದು ಬೆಳಗಾವಿಗೆ ಆಗಮಿಸಿತು ಅವಾಗ ಈಶ್ವರ್ ಕಲಾದಗಿ,ಅಣ್ಣಪ್ಪ ಮಟ್ಟಿಕಲಿ,ಜಿ.ಕೆ ಟಿಕ್ಕೆದ್ ಮೊದಲಾದವರು ಬೆಳಗಾವಿ ಕರ್ನಾಟಕದ ಭಾಗ ಅದನ್ನ ಇಲ್ಲಿಯೇ ಉಳಿಸಬೇಕೆಂಬ ಸಮರ್ಥವಾಗಿ ವಾದವನ್ನ ಮಂಡಿಸಿದರು.ಕನ್ನಡಿಗರು ಬೆಳಗಾವಿ ವಿಷಯವನ್ನ ಅತ್ಯಂತ ಅಚ್ಚುಕಟ್ಟಾಗಿ ಮಂಡಿಸಿದಂತೆ ಮರಾಠಿ ಪ್ರತ್ಯೇಕವಾದಿ ಗುಂಪು ವಿಷಯವನ್ನು ಮಂಡಿಸುವಲ್ಲಿ ಸೋತಿತು.ತನ್ನ ಕರ್ತವ್ಯವನ್ನ ಪ್ರಮಾಣಿಕವಾಗಿ ಮಾಡಿ ಎಲ್ಲರನ್ನ ವಿಶ್ವಾಸಕ್ಕೆ ತೆಗೆದುಕೊಂಡು ಯಾವುದೇ ತರದ ತಾರತಮ್ಯ,ಒತ್ತಡಗಳಿಗೆ ಒಳಗಾಗದೆ ಆಯೋಗವು ತನ್ನ ವರದಿಯನ್ನ ೩೦-೦೯-೧೯೫೫ ರಲ್ಲಿ ಸಲ್ಲಿಸಿತ್ತು.ರಾಜ್ಯ ಪುನರಚನಾ ಆಯೋಗಯದ ವರದಿಯು ೧೦-೧೦-೧೯೫೫ ನೇ ದಿನ ಪ್ರಕಟಗೊಂಡಿದ್ದು ಆ ವರದಿಯ ಫಲಿತಾಂಶದಲ್ಲಿ ಬೆಳಗಾವಿ ಕರ್ನಾಟಕದಿಂದ ಬೇರ್ಪಡಿಸಲಾಗದು ಇದು ಕನ್ನಡ ನಾಡಲ್ಲಿಯೆ ಉಳಿಯುತ್ತೆ ಅಂತ ಬಂದದ್ದು ಮರಾಠಿಗರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿತು.ಆದರೂ ಇವರ ಹಠಮಾರಿತನಕ್ಕೆ ಪೂರ್ಣವಿರಾಮ ಬೀಳಲಿಲ್ಲ.

೧೯೬೫-೬೬ ರಲ್ಲಿ ಮುಂಬೈಯಲ್ಲಿ ಎ.ಐ.ಸಿ.ಸಿ ಅಧಿವೇಶನ ಏರ್ಪಡಿಸಲಾಗಿತ್ತು ಇದರ ಪೂರ್ತಿ ಲಾಭ ಪಡೆಯಲು ಯೋಜನೆ ರೂಪಿಸಿದ ಮರಾಠಿಗರು ತಮ್ಮ ಸ್ವಾರ್ಥ ಸಾಧನೆಗಾಗಿ ವಯೋವೃದ್ಧರಾಗಿದ್ದ ‘ಸೇನಾಪತಿ ಬಾಪಟ’ ಅವರನ್ನ ಉಪವಾಸ ಸತ್ಯಗ್ರಹಕ್ಕೆ ಕೂರಿಸಿತ್ತು ಮುಂಬೈ ಅಧಿವೇಶನದಲ್ಲಿ ಮಹಾರಾಷ್ಟ್ರ ಠರಾವೂ ಮಾಡುವುದರಲ್ಲಿ ಸಫಲರಾದರು ಇವರ ಒತ್ತಡಕ್ಕೆ ಮಣಿದ ಭಾರತದ ಕಾಂಗ್ರೆಸ್ ಸರ್ಕಾರ ಮತ್ತು ಕನ್ನಡನಾಡಿನ ಆಗಿನ ಮುಖ್ಯಮಂತ್ರಿಗಳಾದ ಎಸ್.ನಿಜಲಿಂಗಪ್ಪನವರ ಮೇಲೆ ಬಹಳ ಒತ್ತಡ ತಂದು ಗಡಿ ಆಯೋಗ ಸಮಿತಿಯನ್ನ ನೇಮಿಸಿದ ಸಮಿತಿಗೆ ಸಹಕರಿಸುವಂತೆ ಒಪ್ಪಿಕೊಳ್ಳುವಂತೆ ಮಾಡಲಾಯಿತು.೨೫-೧೦-೧೯೬೬ ರಂದು ಭಾರತದ ಪ್ರಧಾನ ನ್ಯಾಯಧೀಶರಾಗಿದ್ದ ಮೆಹರ್’ಚಂದ್ ಮಹಾಜನ್ ಅವರ ನೇತೃತ್ವದಲ್ಲಿ ‘ಗಡಿ ಆಯೋಗ’ವನ್ನು ರಚಿಸಲಾಯಿತು.ಈ ಆಯೋಗ ವಿರೋಧಿಸಿ ಬೆಳಗಾವಿಯಲ್ಲಿ ಹಳ್ಳಿಕೇರಿ ಗುದ್ಲೆಪ್ಪನವರ ನೇತೃತ್ವದಲ್ಲಿ ಚಳುವಳಿ ಆರಂಭಗೊಂಡಿತು.ಈ ಚಳುವಳಿಯೂ ಬೆಳಗಾವಿಯ ಆಸುಪಾಸಿನ ಜಿಲ್ಲೆಗಳಲ್ಲಿಯು ಹಲವಾರು ಕನ್ನಡಪರ ಕಾಳಜಿಯುಳ್ಳ ನಾಯಕರ ನೇತೃತ್ವದಲ್ಲಿ ನಡೆಯಿತು. ಮಹಿಳೆಯರು ಕೂಡ ಈ ಚಳುವಳಿಯ ಭಾಗವಾಗಿದ್ದು ಒಂದು ಇತಿಹಾಸ.ಈ ಆಯೋಗವು ಕನ್ನಡ ನಾಡಿನ ಬೆಳಗಾವಿಗೆ ಭೇಟಿ ನೀಡಿ ಇಲ್ಲಿರುವ ಹಲವಾರು ರೀತಿಯ ವಾತಾವರಣದ ಬಗ್ಗೆ ಅಧ್ಯಯನ ಮಾಡಿ ಜನರನ್ನ ಸಂದರ್ಶಿಸಿದರು ಈ ಆಯೋಗದ ಸದಸ್ಯರ ಮುಂದೆ ‘ಬೆಳಗಾವಿ ಕನ್ನಡನಾಡಿನ ಅವಿಭಾಜ್ಯ ಅಂಗ ಗಡಿ ವಿವಾದ ಅನ್ನೋದು ಮುಗಿದು ಹೋದ ಅಧ್ಯಾಯ ಅದನ್ನು ಮತ್ತೆ ಕೆದಕಬಾರದು’ ಎಂದು ವಿಧ್ಯಾರ್ಥಿ ಪ್ರಸಾದ ನಿಲಯದ ಪರವಾಗಿ ಶ್ರೀ ಶಿವಬಸವಸ್ವಾಮಿಜಿ ಅವರು ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ಮಂಡಿಸಿದರು ಇದೆ ಮಾತು ಕನ್ನಡಿಗರ ಪರವಾಗಿ ಅಂತಿಮ ನಿರ್ಣಾಯಕವಾಗಿತ್ತು. ೧೫-೦೮-೧೯೬೭ ರಂದು ಮೆಹರ್’ಚಂದ್ ಮಹಾಜನ್ ಆಯೋಗ ತನ್ನ ಸುಧೀರ್ಘ ವರದಿಯನ್ನು ಭಾರತ ಸರ್ಕಾರಕ್ಕೆ ಸಮರ್ಪಿಸಿತು ಇದರ ಫಲಿತಾಂಶವೂ “ಬೆಳಗಾವಿ ಕನ್ನಡ ನಾಡಿನ ಅವಿಭಾಜ್ಯ ಅಂಗ ಅದನ್ನ ಮಹಾರಾಷ್ಟ್ರಕ್ಕೆ ಸೇರಿಸಲಾಗದು” ಎಂದು ಸ್ಪಷ್ಟವಾಗಿ ಬಂದಿತ್ತು.ಈ ವಿಷಯ ತಿಳಿದ ಮರಾಠಿಗರು ಕೆಂಡಾಮಂಡಲವಾಗಿದ್ದರು ಯಾಕೆಂದರೆ ತಾವೆ ಸ್ವತಃ ಭಾರತ ಸರ್ಕಾರದ ಮೇಲೆ ಒತ್ತಡ ಹೇರಿ ಆಯೋಗವನ್ನ ನೇಮಿಸುವಂತೆ ಮಾಡಿದ್ದರು ಹಾಗಾಗಿ ಈ ಆಯೋಗವೂ ತಮ್ಮ ಪರವಾದ ಫಲಿತಾಂಶ ಕೊಡುತ್ತದೆ ಅಂತಾ ನಿರ್ಧರಿಸಿದರು ಆದರೆ ಹಾಗಾಗಲಿಲ್ಲಾ.ಇತ್ತ ಕನ್ನಡಿಗರು ಮತ್ತೆ ಸಂಭ್ರಮಿಸಿದರು ಮತ್ತೆ ಮರಾಠಿ ಪ್ರತ್ಯೇಕವಾದಿಗಳ ತನ್ನ ಕಾಯಕವಾಗಿಸಿಕೊಂಡಿದ್ದ ಕಲ್ಲು ತೂರಾಟ,ಆಸ್ತಿಪಾಸ್ತಿಗಳ ಹಾನಿ ಕನ್ನಡಪರ ನಾಯಕರ ಮನೆಗೆ ಬೆಂಕಿ ಹಚ್ಚೋದು ಮಾಡುತ್ತಾ ಹೋದರು.ಧಾರ್,ವಾಂಛೂ,ಫಜಲ್ ಅಲಿ ಮತ್ತು ಮಹಾಜನ್ ಆಯೋಗಗಳು ಎಲ್ಲವೂ ಬೆಳಗಾವಿಯು ಕನ್ನಡನಾಡಿನ ಭಾಗವಾಗಿದೆ ಎಂದು ಸ್ಪಷ್ಟ ಪಡಿಸಿ ಎರಡ್ಮೂರು ದಶಕಗಳೆ ಕಳೆದಿವೆ.ಬೆಳಗಾವಿಯ ಹಿರಿಯ ಪ್ರಭಾವಿ ನಾಯಕರಾಗಿದ್ದ ಗಂಗಾಧರರಾವ್ ದೇಶಪಾಂಡೆಯವರು ಮರಾಠಿ ಭಾಷೆಯ ವ್ಯಾಮೋಹಿಯಾಗಿದ್ದವರು ಹಲವಾರು ಬಾರಿ ತಾವೂ ಭಾಷಣ ಮಾಡುವಾಗ ಕನ್ನಡಿಗರ ವಿರೋಧ ಎದುರಿಸಿದ್ದಾರೆ ಅಂತಹ ಮರಾಠಿ ವ್ಯಾಮೋಹಿ ಫಜಲ್ ಅಲಿ ಆಯೋಗದ ಸದಸ್ಯರ ಎದುರು ಬೆಳಗಾವಿ ಕರ್ನಾಟಕದ್ದು ಇದು ಕನ್ನಡನಾಡಲ್ಲಿ ಇರಬೇಕು ಎಂದು ಖಡಾಖಂಡಿತವಾಗಿ ಹೇಳಿದ್ದಾರೆ.ಇವರನ್ನ ಸಹಾ ಮರಾಠಿ ಪ್ರತ್ಯೇಕವಾದಿಗಳು ದೂಷಿಸಿದರು.’Times of Marthi’ ಪತ್ರಿಕೆ ಹಾಗೂ ‘ಸಕಾಳ್’ ಮರಾಠಿ ಪತ್ರಿಕೆಗಳು ಇವರ ಪುಂಡಾಟಿಕೆ ಗುಂಡಾಗಿರಿಯನ್ನ ಸಂಪಾದಕೀಯ ಬರೆಯೋದರ ಮೂಲಕ ಖಂಡಿಸಿತ್ತು ಈ ಪತ್ರಿಕೆಗಳು ಮರಾಠಿಗರ ಕೆಂಗಣ್ಣಿಗೆ ಗುರಿಯಾಗಬೇಕಾಯ್ತು.ಹೆಜ್ಜೆ ಹೆಜ್ಜೆಗೂ ಅಮಾಯಕ ಮರಾಠಿಗರು ಮತ್ತು ಕನ್ನಡಿಗರ ಮಧ್ಯ ತಿಕ್ಕಾಟ ಹಚ್ಚಿ ಆಟ ಆಡುವಾ ಈ ಮರಾಠಿ ಪುಂಡರಿಗೆ ಬುದ್ದಿ ಬರದು.ಕಳೆದ ಎರಡು ವಾರದಲ್ಲಿ ಎಂ.ಇ.ಎಸ್ ಮಾಡಿದ ಮಹತ್ಕಾರ್ಯಗಳೆಂದರೆ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ವಿಧಾನ ಮಂಡಲ ಅಧಿವೇಶನಕ್ಕೆ ದಿನಾಂಕ ೧೪-೧೨-೨೦೨೧ ರಂದು ಅಕ್ರಮವಾಗಿ ನುಗ್ಗಿದ ಎಂ.ಇ.ಎಸ್ ಮುಖಂಡರಾದ ದೀಪಕ ದಳವಿ ಹಾಗೂ ಸಂಗಡಿಗರು ‘ಬೆಳಗಾವಿಯು ಮಹಾರಾಷ್ಟ್ರಕ್ಕೆ ಸೇರಬೇಕು’ ಎಂದು ನಾಡವಿರೋಧಿ ಘೋಷಣೆ ಕೂಗುವಾಗ ಅದೆ ಸಮಯದಲ್ಲಿ ಅಲ್ಲೆ ಹಾಜರಿದ್ದ ಕನ್ನಡಪರ ಯುವಕರು ಅವರನ್ನ ತಡೆಯಲು ಮುಂದಾಗಿದ್ದರು ಅವರನ್ನ ನಿಂದಿಸಿದ ಎಂ.ಇ.ಎಸ್ ಮುಖಂಡನ ಮುಖಕ್ಕೆ ಕಪ್ಪು ಮಸಿಯನ್ನ ಹಾಕಿ ತಮ್ಮ ವಿರೋಧ ವ್ಯಕ್ತ ಪಡಿಸಿದರು ಆ ಕೂಡಲೇ ಕನ್ನಡಪರ ಯುವಕರನ್ನ ಸ್ಥಳದಲ್ಲೆ ಪೋಲಿಸರು ಬಂಧಿಸಿ ಅಲ್ಲಿಂದ ಕರೆದುಕೊಂಡು ಹೋಗಿದ್ದರು ಅಷ್ಟೆ ಅಲ್ಲದೆ ಅವರ ಮೇಲೆ ‘ಕೊಲೆಗೆ ಯತ್ನ’ ಅಂತ ಪ್ರಕರಣ ದಾಖಲಿಸಲಾಯ್ತು.ಇಂತದನ್ನೆ ಕಾಯ್ತ ಕುಳಿತಿದ್ದ ಶಿವಸೇನೆ ಮತ್ತು ಎಂ.ಇ.ಎಸ್ ಪುಂಡರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ನಮ್ಮ ನಾಡ ಬಾವುಟವನ್ನ ಸುಟ್ಟು ವಿಕೃತಿ ಮೆರೆದರು.ಇದಕ್ಕೆ ಪ್ರತಿಯಾಗಿ ೧೮ ನೇ ತಾರೀಕು ಬೆಂಗಳೂರಿನಲ್ಲಿ ಶಿವಾಜಿ ಮೂರ್ತಿಗೆ ಮಸಿ ಬಳಿದು ಆಕ್ರೋಶ ವ್ಯಕ್ತ ಪಡಿಸಿದ ಕನ್ನಡಿಗರ ಮೇಲೆ ಮತ್ತೆ ಇಲ್ಲ ಸಲ್ಲದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಅವರನ್ನ ಬಂಧಿಸಲಾಯಿತು.ಇದಕ್ಕೆ ಪ್ರತಿಯಾಗಿ ಎಂ.ಇ.ಎಸ್,ಮಹಾರಾಷ್ಟ್ರ ನವನಿರ್ಮಾಣ ಸೇನೆ ಶಿವಸೇನೆಯವರು ಮಹಾರಾಷ್ಟ್ರ ರಾಜ್ಯದ ಸಾಂಗ್ಲಿ ಜಿಲ್ಲೆಯ ಮಿರಜ್ ಪಟ್ಟಣದಲ್ಲಿ ಮನಸ್ಸಿಗೆ ಬಂದಂತ್ತೆ ಕನ್ನಡಿಗರ ಆಸ್ತಿಪಾಸ್ತಿಗಳ ಮೇಲೆ ದಾಳಿ ಮಾಡಿ ಅವರ ವಾಹನಗಳು,ಅಂಗಡಿ ಮುಂಗಟ್ಟುಗಳೆಲ್ಲವೂ ಪುಡಿ ಪುಡಿ ಮಾಡಿದ್ದರು ಅಲ್ಲದೆ ಕನ್ನಡಿಗರ ಮೇಲೆ ಹಲ್ಲೆ ಮಾಡಿದ್ದು ಸುದ್ದಿಯಾಗಿದೆ ೧೦ ಕಿಂತ ಹೆಚ್ಚಿನ ಕನ್ನಡದ ಮೂಲದವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಆದರು ಇವರ ಮೇಲೆ ಯಾವ ಕಾನೂನು ಕ್ರಮ ಎರಡು ರಾಜ್ಯದ ಸರ್ಕಾರಗಳು ತೆಗೆದುಕೊಳ್ಳಲಿಲ್ಲಾ.ಇತ್ತ ಅದೆ ದಿನದ ರಾತ್ರಿಯಲ್ಲಿ ಬೆಳಗಾವಿಯ ಆನಗೋಳು ಊರಿನಲ್ಲಿ ಸಂಗೊಳ್ಳಿ ರಾಯಣ್ಣನವರ ಮೂರ್ತಿ ಮೇಲೆ ದಾಳಿ ಮಾಡಿ ಮೂರ್ತಿಯನ್ನ ಧ್ವಂಸಗೊಳಿಸುವ ಕೆಲಸಕ್ಕೆ ಕೈಹಾಕಿದ್ದರು ಅಲ್ಲು ಅವರನ್ನ ಸುಮ್ಮನೆ ಬಂಧಿಸಿ ಕರೆದುಕೊಂಡು ಹೋಗಲಾಗಿದೆ ಅಷ್ಟೆ ಬಿಟ್ಟರೆ ಯಾವ ಪ್ರಕರಣವೂ ದಾಖಲಿಸಲಿಲ್ಲಾ.ಮರುದಿವಸವೇ ಸ್ಥಳಿಯ ಕನ್ನಡಿಗರು ಮತ್ತೆ ಸಂಗೊಳ್ಳಿ ರಾಯಣ್ಣನವರ ಹೊಸ ಮೂರ್ತಿ ಅದೆ ಜಾಗದಲ್ಲಿ ಸ್ಥಾಪಿಸಿ ಇವರಿಗೆ ತಿರುಗೇಟು ನೀಡಿದರು.ಇವರ ಗುಂಡಾಗಿರಿಯನ್ನ ಖಂಡಿಸಿ ಕನ್ನಡಪರ ನಾಯಕರು ಬೆಳಗಾವಿ ಚಲೋಗೆ ಕರೆ ನೀಡಿದರು ರಾಜ್ಯದ ಪ್ರತಿ ಜಿಲ್ಲೆಯ ಕನ್ನಡಿಗರು ಬೆಳಗಾವಿಯತ್ತ ಧಾವಿಸಿದರು ಕನ್ನಡಪರ ನಾಯಕರನ್ನ ಬೆಳಗಾವಿಯನ್ನ ಪ್ರವೇಶ ಮಾಡೋಕೆ ಬಿಡದೆ ಪೋಲಿಸರು ದಾರಿಯಲ್ಲೆ‌ ಬಂಧಿಸಿ ಪೋಲಿಸ್ ಠಾಣೆಗೆ ಕರೆದುಕೊಂಡು ಹೋದರು ಇಷ್ಟೆಲ್ಲಾ ಆದರು ಕೂಡ ಕನ್ನಡಿಗರು ಕಾನೂನಿನ ಚೌಕಟ್ಟಲ್ಲಿಯೇ ಇವರ ವಿಧ್ವಂಸಹ ಕೃತ್ಯವನ್ನ ಖಂಡಿಸಿ ಜಿಲ್ಲಾಧಿಕಾರಿಗಳ ಮೂಲ ರಾಜ್ಯದ ಮುಖ್ಯಮಂತ್ರಿ ಮತ್ತು ಗೃಹ ಇಲಾಖೆಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ಒಂದೆರಡು ಸಲ ಪೋಲಿಸರ ಮೇಲೆ ಪೋಲಿಸ್ ಠಾಣೆಯ ಮೇಲೆ ಪುಂಡರು ಕಲ್ಲು ತೂರಾಟ ಮಾಡಿ ಠಾಣೆಯಲ್ಲಿರುವ ಕೆಲವು ವಸ್ತುಗಳನ್ನ ಜಖಂಗೊಳಿಸಿದ್ದು ನೋಡಿದರೆ ಇಲ್ಲಿಯ ಪೋಲಿಸ್ ಇಲಾಖೆಗೆ ನಮ್ಮ ಸರ್ಕಾರ ನೀಡಿರುವ ಅಧಿಕಾರ ಎಷ್ಟು ಅನ್ನೋದು ಪ್ರಶ್ನೆ ಮೂಡುತ್ತೆ..?
ಇಷ್ಟೆಲ್ಲಾ ಅವಾಂತರಗಳು ಮಾಡಿರುವ ಮಾಡುತ್ತಿರು ಎಂ
ಇ.ಎಸ್,ಶಿವಸೇನೆ ಮತ್ತು ಇದಕೆಲ್ಲಾ ಹಿಂದೆ ನಿಂತು ಸಮಯಕ್ಕೆ ತಕ್ಕಂತೆ ಪ್ರಚೋದನೆ ಮಾಡ್ತಾ ಇರೋ ಮಹಾ ಪಂಡಿತರ ಗುಂಪಿನ ಬಗ್ಗೆ ಸುಧೀರ್ಘವಾಗಿ ಬರೆಯಲು ಕಾರಣವೆಂದರೆ ಈ ವಿವಾದವನ್ನ ನಿನ್ನೆ ಮೊನ್ನೆ ಎದ್ದಂತೆ ಭಾವಿಸಿ ಮನಸ್ಸಿಗೆ ಬಂದಂತೆ ಮಾತಾಡಿ ಉದ್ರೇಕಿಸುವ ಜನರ ಗುಂಪುಗಳು ಎರಡು ಕಡೆಯವರ ಮಧ್ಯದಲ್ಲಿದಾವೆ ಅವರ ಅರ್ಥಹೀನ ಪ್ರಚೋದನೆಯಿಂದ ಆಗುವ ನಷ್ಟಕ್ಕೆ ಎರಡು ಕಡೆಯ ಅಮಾಯಕರು ಬೆಲೆ ತೆತ್ತಬೇಕಾಗುತ್ತದೆ ಅನ್ನೋ ಕನಿಷ್ಠ ಪರಿಜ್ಞಾನ ಇರೋದಿಲ್ಲ.ಅಂತವರಿಗೆ ಅಲ್ಪವಾದರು ತಿಳಿಯಲಿ ಸತ್ಯದ ಪರವಾಗಿ ಮಾತಾಡುವ ಮನಸ್ಸು ಮಾಡಲಿ ಎನ್ನೊದಷ್ಟೆ ಉದ್ದೇಶ.ಇನ್ನೂ ಕನ್ನಡ ನಾಡಿನ ಸರ್ಕಾರದ ಮೇಲೆ ಬೆಳಗಾವಿ ವಿಷಯದಲ್ಲಿ ಬಹಳ ದೊಡ್ಡ ಜವಾಬ್ದಾರಿ ಇದೆ ಜನರಿಗೆ ಇವರಿಂದ ಅಷ್ಟೇ ದೊಡ್ಡ ಮಟ್ಟದ ನಿರೀಕ್ಷೆ ಕೂಡ ಇದೆ ಆದಷ್ಟು ಬೇಗ ಎಂ.ಇ.ಎಸ್ ಸೇರಿದಂತೆ ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕೆಡಿಸಿ ಎರಡು ಭಾಷಿಕರ ಸಹಬಾಳ್ವೆಗೆ ಹುಳಿ ಹಿಂಡುವ ಯಾವುದೇ ಸಂಘ,ಸಂಘಟನೆ,ಸಮಿತಿಗಳನ್ನ ಪೂರ್ಣವಾಗಿ ನಿಷೇಧಿಸಬೇಕು ಹಾಗೂ ಬೆಳಗಾವಿಯಲ್ಲಿ ಮರಾಠಿಗರನ್ನ ಕನ್ನಡಿಗರ ವಿರುದ್ಧ ಎತ್ತಿಕಟ್ಟುವ ಕೆಲಸ ಮಾಡುತ್ತಿರುವ ಪತ್ರಿಕೆಗಳ ಮೇಲೆ ಕಠಿಣ ಕ್ರಮಕೈಗೊಂಡು ಮುಂದೆ ಆ ತರದ ವಿಷಯ ಪ್ರಕಟಿಸದಂತೆ ಎಚ್ಚರಿಸಬೇಕು.ಹಾಗೇಯೆ ನಿರ್ವಿವಾದವಿರುವ ಬೆಳಗಾವಿಯ ವಿಷಯಕ್ಕೆ ಸಂಬಂಧಿಸಿದಂತೆ ಪ್ರಚೋದನಕಾರಿ ಹೇಳಿಕೆ,ಭಾಷಣ,ಬರಹಗಳು ಯಾರಾದರು ಹಂಚಿಕೊಂಡಲ್ಲಿ ಅಂತವರ ವಿರುದ್ಧ ರಾಜದ್ರೋಹದ ಆರೋಪದಡಿಯಲ್ಲಿ ಪ್ರಕರಣ ದಾಖಲಿಸಬೇಕು.ಅಂತೆಯೆ ಮರಾಠಿಗರ ಸಮಸ್ಯೆಗಳಿಗೆ ಸರ್ಕಾರವೂ ಸಕಾರಾತ್ಮಕವಾಗಿ ಸ್ಪಂದಿಸಬೇಕು ಅವರಲ್ಲಿ ಮಲತಾಯಿ ಧೋರಣೆ ಮನಸ್ಥಿತಿ ಹುಟ್ಟಿಕೊಳ್ಳದಂತೆ ನೋಡಿಕೊಳ್ಳಬೇಕು.ಇನ್ನು ಉಳಿದದ್ದು ಬೆಳಗಾವಿ ಕನ್ನಡಿಗರದ್ದು ಹೆಚ್ಚಿನ ಜವಾಬ್ದಾರಿ ಸಹಬಾಳ್ವೆಯಿಂದ ಬಾಳೋದು ಅವರೆಂದಿಗೂ ಇದಕ್ಕೆ ವಿರುದ್ಧವಾಗಿ ನಡೆಯೋದಿಲ್ಲ.ಕಲ್ಲಿಗೆ ಕಲ್ಲು,ಬೆಂಕಿಗೆ ಬೆಂಕಿ,ಲಾಠಿಗೆ ಲಾಠಿ ಅನ್ನೋ ತರದ ಮಾನಸಿಕತೆ ಇರುವ ಕನ್ನಡಿಗರು ಇದ್ದಿದ್ದರೆ ಇಲ್ಲಿಯವರೆಗೆ ಅನಾಹುತಗಳು ಲೆಕ್ಕಹಾಕಲು ಆಗುತ್ತಿರಲಿಲ್ಲಾ ಆರಂಭದಿಂದ ಇಲ್ಲಿಯವರೆಗೆ ಕನ್ನಡಿಗರು ಸಂಯಮ ಮತ್ತು ಪ್ರಬುದ್ದತೆ ಎರಡು ತೋರಿದ್ದಾರೆ.
ಕಳೆದ ಎಂಟು ದಶಕಗಳಿಂದ ಈ ವಿವಾದದವೂ ಕಾಲಕ್ಕೆ ತಕ್ಕಂತೆ ರೂಪ ಪಡೆದು ರಾಜಕೀಯಕ್ಕೆ ಅಸ್ತ್ರವಾಗಿ ಬಳಕೆಯಾಗ್ತಾ ಇರೋದು ದುರಂತ ಇದರಿಂದ ಆದ ಕಷ್ಟ ನಷ್ಟಗಳೆ ಹೆಚ್ಚು ಹೊರತಾಗಿ ಯಾವುದೇ ಲಾಭವಾಗಿಲ್ಲ ಜನರು ಇದನ್ನ ಅರ್ಥ ಮಾಡಿಕೊಳ್ಳಬೇಕು.ಬೆರಳೆಣಿಕೆಯಷ್ಟು ಜನರಿಂದ ದಾರಿ ತಪ್ಪುತ್ತಿರುವ ಇಡಿ ಮರಾಠಿ ಭಾಷಿಕ ಸಮುದಾಯವೂ ಸತ್ಯವನ್ನ ಸ್ವಯಂ ಅರ್ಥ ಮಾಡಿಕೊಂಡು ಇಂತಹ ಸಮಾಜಘಾತೂಕ ಗುಂಪಿನಿಂದ ದೂರವಿದ್ದು ಬಿಡುವುದನ್ನ ಕಲಿಯೋದು ಅನಿವಾರ್ಯವಾಗಿದೆ.ಮರಾಠಿಗರು ಕಾಲಕ್ಕೆ ತಕ್ಕಂತೆ ಹೊಂದಿಕೊಳ್ಳುವ ಮನಸ್ಸು ಮಾಡಿದರೆ ನಾವಿರುವ ವಾತಾವರಣ ಶಾಂತವಾಗಿಯೆ ಇರುತ್ತದೆ.

“ಇವನಾರವ ಇವನಾರ ಇವನಾರವ ಎಂದೆನಿಸದೆ
ಇವನಮ್ಮವ ಇವನಮ್ಮನ ಇವನಮ್ಮ ಎಂದೆನಿಸಯ್ಯ”

ಎಂದು ವಿಶ್ವಗುರು ಬಸವಣ್ಣನವರು ಮನುಷ್ಯನಲ್ಲಿರುವ ಎಲ್ಲ ತರದ ಅಂತರವನ್ನ ಕೊನೆಗೊಳಿಸಿ ಬದುಕುವ ಸೂತ್ರವನ್ನ ಕೊಟ್ಟಿದ್ದಾರೆ ಎಷ್ಟೆಯಾದರು ಮಹಾರಾಷ್ಟ್ರ ಮಣ್ಣಿಗೂ ಶರಣರ ಗಾಳಿ ಸೋಕಿದ್ದು ಅಚ್ಚಳಿಯದ ಇತಿಹಾಸ.ಸಾಮರಸ್ಯ ಸಹೋದರತ್ವ ಬೆಳೆಸಿ ಸಹಬಾಳ್ವೆಯಿಂದ ಬದುಕೋದು ಇದನ್ನರಿತವರ ಕರ್ತವ್ಯ.

ರಾಜೇಶ್ ಶಿಂಧೆ ,ಬೀದರ್
ಮೊ: 8105423638