Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love


ನಟಿಯಾದಳು ಗರ್ಭಿಣಿ, ಬಿಟಿವಿಯಲ್ಲಿ ಉಲ್ಲಾಸದ ಹೂಮಳೆ: ಒಂದು ಬಾರ್ಕಿಂಗ್ ನ್ಯೂಸ್ ಕತೆ

ಆತ ಪುಂಖಾನುಪುಂಖವಾಗಿ ಹೇಳುತ್ತ ಹೋದಂತೆ ಟಿವಿ ಪರದೆ ಮೇಲೆ ನಟಿಯೊಬ್ಬಳು ಗರ್ಭಿಣಿ ಆದ ಸುದ್ದಿ ಚಲಿಸುತ್ತ ಇರುತ್ತದೆ. ನಿರೂಪಕನ ಉತ್ಸಾಹ ಎಲ್ಲೆ ಮೀರುತ್ತದೆ. ತನ್ನ ಖುಷಿಯನ್ನು ಇಡೀ ಕರ್ನಾಟಕದ ಮೇಲೆ ಆರೋಪಿಸಿ ಬಿಡುತ್ತಾನೆ. ಆಗ ಬಿಟಿವಿ ಸ್ಟುಡಿಯೋದಲ್ಲಿ ಉಲ್ಲಾಸದ ಹೂಮಳೆ! ಅಲ್ಲಿ ಕೆಲಸ ಮಾಡುವ ಪಡ್ಡೆಯೊಬ್ಬ ಕೇಕ್‌ ತರಲು ಹೊರಟಿದ್ದನಂತೆ. ಯಾರೋ ಸೀನಿಯರ್‌ ಉಗಿದ ಮೇಲೆ ತೆಪ್ಪಗೆ ಕುಳಿತನಂತೆ. ಆದರೆ ನಿರೂಪಕನ ಸಂಭ್ರಮ ಮಾತ್ರ ಅವ್ಯಾಹತವಾಗಿ ಮುಂದುವರೆದಿತ್ತು.

ಒಟ್ಟು 15 ನಿಮಿಷ ಕಾಲ ಹೇಳಿದ್ದನ್ನೇ ಹೇಳುತ್ತ ಬಾರ್ಕಿಂಗ್‌ ನ್ಯೂಸ್‌ ಸೃಷ್ಟಿ ಮಾಡಿಬಿಟ್ಟ ಪುಣ್ಯಾತ್ಮ!

ಇಡೀ ಕತೆಯ ಸಾರಾಂಶ ಒಂದೇ ಲೈನ್‌: ಗರ್ಭಿಣಿಯಾದ ನಟಿ ಸಾಮಾಜಿಕ ಜಾಲತಾಣದಲ್ಲಿ ಫೋಟೊ ಹಾಕಿಕೊಂಡು, ʼಇನ್ಮೇಲೆ ನಾವು ಇಬ್ಬರಷ್ಟೇ ಅಲ್ಲ…ʼ ಎಂದು ಬರೆದುಕೊಂಡಿದ್ದು…ಈ ಒಂದು ಎಳೆ ಹಿಡಿದು 15 ನಿಮಿಷ ಗಿಂಜುತ್ತಾನೆ ಎಂದರೆ,,,

ನಟಿಯ ಸಂದೇಶದ ಸ್ಕ್ರೀನ್‌ಶಾಟ್‌ ತೋರಿಸುವ ಆತ, ʼನೋಡಿ ನೋಡಿ ಫೋಟೊ ನೋಡಿ. ಈ ಒಂದು ಫೋಟೊನೇ ಎಲ್ಲ ಕತೆ ಹೇಳುತ್ತದೆʼ ಎನ್ನುತ್ತಾನೆ. ಅಂದರೆ ಈ ಸಮಯದಲ್ಲಿ ಆತನ ತಲೆಯಲ್ಲಿ ಏನು ಓಡುತ್ತಿರಬಹುದು ಮತ್ತು ಆತನ ದೃಷ್ಟಿ ಎಲ್ಲಿ ನೆಟ್ಟಿರಬಹುದು ಎಂಬುದನ್ನು ಊಹಿಸಿ…ಬೇಡ ಬಿಡಿ ಸುಮ್ಮನೆ ಟೈಮ್‌ವೇಸ್ಟ್‌!
ಈ ಬಿಟಿವಿಯವರಿಗೆ ಯಾರು ಹೇಳಿದರು ಇಡೀ ಕರ್ನಾಟಕ ಸಂಭ್ರಮ ಪಡುತ್ತಿದೆ ಎಂದು? ಇವರೇನು ಸಮೀಕ್ಷೆ ಮಾಡಿದ್ದಾರ? ವಿಚಿತ್ರ ಎಂದರೆ ಬಹುಪಾಲು ಸಿನಿಪ್ರಿಯರಿಗೆ ಆ ನಟಿಯ ಹೆಸರೇ ಮರೆತು ಹೋಗಿದೆ.

ʼಮದುವೆಯಾಗಿ 5 ವರ್ಷಗಳ ನಂತರ ನಟಿ ಗರ್ಭಿಣಿ ಆಗುತ್ತಿದ್ದಾರೆ. ಎಷ್ಟೊಂದು ಖುಷಿಯಾಗಿರಬೇಡ?ʼ ಎಂದು ನಮ್ಮನ್ನೇ ನಿರೂಪಕ ಕೇಳುತ್ತಾನೆ. ಯಾರಿಗೆ ಖುಷಿಯಾಯ್ತೋ ಇಲ್ಲವೋ ಗೊತ್ತಿಲ್ಲ, ಆತನಿಗೆ ಮಾತ್ರ ಥ್ರಿಲ್‌ ಆಗಿದ್ದು ಸುಳ್ಳಲ್ಲ…ʼನಟಿಯನ್ನು ಕನ್ನಡಿಗರು ತಮ್ಮ ಮನೆ ಮಗಳಂತೆ ನೋಡಿದ್ದರುʼ ಎಂಬ some-ಶೋಧನೆಯನ್ನೂ ಪ್ರಕಟಿಸಿದ! ಡೆಲಿವರಿ ಡೇಟ್‌ ಹೇಳಲಿಲ್ಲವಷ್ಟೇ! ಅಲ್ಲಿ ನಟಿ ಗರ್ಭಿಣಿ, ಇಲ್ಲಿ ಬಿಟಿವಿಯಲ್ಲಿ ಉಲ್ಲಾಸದ ಹೂಮಳೆ…
ಇದು ಟಿವಿ ಮಾಧ್ಯಮ ತಲುಪಿರುವ ಹಂತ. ಇದು ಬರೀ ಬಿಟಿವಿ ಕತೆಯಲ್ಲ. ಬಹುಪಾಲು ನ್ಯೂಸ್‌ ಚಾನೆಲ್‌ಗಳ ಕತೆಯೂ ಇದೇ.  ಟಿಆರ್‌ಪಿಗಾಗಿ ಅವು ರೋಚಕತೆಯ ಹಿಂದೆ ಬಿದ್ದಿವೆ. ವಿಪರೀತ ಮಳೆಯಿಂದಾದ ಬೆಳೆ ನಾಶ ಅವಕ್ಕೆ ಕಾಟಾಚಾರದ ನ್ಯೂಸ್‌ ಅಷ್ಟೇ. ಈ ಹಿಂದೆಯೂ ಹಲವರು ನಟಿಯರು ಗರ್ಭಿಣಿಯರಾದಾಗ ಇದೇ ರೀತಿ ಚಾನೆಲ್‌ಗಳು ವರ್ತಿಸಿದ್ದವು. ಸಿನಿಮಾ, ಕ್ರಿಕೆಟ್‌ ತಾರೆಗಳ ವೈಯಕ್ತಿಕ ವಿಷಯಗಳಿಗೆ ರೆಕ್ಕಪುಕ್ಕ ಕಟ್ಟಿ 15 ನಿಮಿಷ ಕುಟ್ಟುವುದು ಅವಕ್ಕೆ ಅಭ್ಯಾಸವಾಗಿದೆ.
ನಟ ಪುನೀತ್‌ ಅವರ ಸ್ಮರಣಾರ್ಥ ನಡೆದ ಅನ್ನ ಸಂತರ್ಪಣೆಯಂದು ಅಡುಗೆ ಮನೆಯಲ್ಲೇ ಚಾನೆಲ್‌ಗಳು ಠಿಕಾಣಿ ಹೂಡಿದ್ದವು.

ನಟ/ನಟಿಯ ಮದುವೆ, ಗೃಹಪ್ರವೇಶ ಎಲ್ಲವೂ ಟಿಆರ್‌ಪಿ ಸರಕುಗಳೇ!

ಆ ನಟಿ, ಆಕೆಯ ಪತಿ ಮತ್ತು ಕುಟುಂಬ ಸದಸ್ಯರಿಗೂ ಮುಜುಗರವಾಗುವ ಹಾಗೆ ಬಿಟಿವಿಯ ಬ್ರೇಕಿಂಗ್‌ ಅಲ್ಲ ಬಾರ್ಕಿಂಗ್‌ ಸ್ಟೋರಿ ಇತ್ತು. ಆ ನಟಿಯ ಮೇಲೆ ದೃಷ್ಟಿ ಬಿತ್ತೇನೋ?