Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ್‌: ಜಿಲ್ಲೆಯಲ್ಲಿ 15 ದಿನಗಳಿಂದ ಶೀತಗಾಳಿ ಬೀಸುತ್ತಿದೆ. ಆಗಾಗ ಮೋಡ ಕವಿದ ವಾತಾವರಣ ಸೃಷ್ಟಿಯಾಗುತ್ತಿದೆ. ಇದರಿಂದ ಬಹಳಷ್ಟು ಜನರಲ್ಲಿ ಕೆಮ್ಮು, ನೆಗಡಿ, ಜ್ವರ ಕಾಣಿಸಿಕೊಂಡಿದ್ದು, ಆಸ್ಪತ್ರೆಗಳು ರೋಗಿಗಳಿಂದ ತುಂಬಿ ತುಳುಕುತ್ತಿವೆ.

ಬಿಸಿಲು ಅತಿಥಿಯಂತೆ ಬಂದು ಹೋಗುತ್ತಿದೆ. ಮೋಡ ಕವಿದ ವಾತಾವರಣದಿಂದಾಗಿ ವೈರಾಣುಗಳ ಸಂಖ್ಯೆ ಹೆಚ್ಚುತ್ತಿದೆ. ಇದರ ಪರಿಣಾಮ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಬಹುಬೇಗ ಜ್ವರಕ್ಕೆ ಒಳಗಾಗುತ್ತಿದ್ದಾರೆ. ಆಸ್ತಮಾ, ಹೃದ್ರೋಗ, ಶ್ವಾಸಕೋಶ ಸಂಬಂಧಿ ಸೋಂಕುಗಳು ಕಾಣಿಸಿಕೊಳ್ಳತೊಡಗಿವೆ. ಹವಾಮಾನ ಬದಲಾವಣೆಯಿಂದ ಬಹಳಷ್ಟು ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದೆ.

‘ಸಂಜೆ ಆಗುತ್ತಲೇ ಹೆಚ್ಚು ಚಳಿ ಆವರಿಸಿಕೊಳ್ಳುತ್ತಿದೆ. ಬೆಳಗಿನ ಜಾವವೂ ವಿಪರೀತ ಚಳಿ ಇದೆ. ಗ್ರಾಮಗಳಲ್ಲಿ ಬಹುತೇಕ ಜನರಲ್ಲಿ ಕೆಮ್ಮು, ನೆಗಡಿ ಜ್ವರ ಕಾಣಿಸಿಕೊಂಡಿದೆ. ಜನ ಪಂಚಾಯಿತಿ ಕಟ್ಟೆ ಮೇಲೆ ಕುಳಿತುಕೊಳ್ಳಲು ಸಹ ಭಯ ಪಡುತ್ತಿದ್ದಾರೆ’ ಎಂದು ಔರಾದ್‌ ತಾಲ್ಲೂಕಿನ ಬೋರಗಿಯ ಸಚಿನ್‌ ಹಾಗೂ ಹುಲಸೂರಿನ ಕಲ್ಲಯ್ಯ ಮಠಪತಿ ಹೇಳುತ್ತಾರೆ.

‘ಅತಿಯಾದ ಶೀತದಿಂದ ರಕ್ತದೊತ್ತಡ ಕಡಿಮೆಯಾಗುವುದು. ಶರೀರದ ಒಂದು ಭಾಗ ನಿರ್ಜೀವಗೊಂಡಂತಾಗುವುದು, ಬ್ರೇನ್‌ ಹ್ಯಾಮರೇಜ್, ರಕ್ತ ವಾಹಿನಿ ಹೆಪ್ಪು ಕಟ್ಟುವುದು, ಹೃದಯಾಘಾತ, ಮಾನಸಿಕ ಹಾಗೂ ದೈಹಿಕ ಸಮತೋಲನದಲ್ಲಿ ವ್ಯತ್ಯಾಸ ಕಂಡು ಬರುವ ಸಾಧ್ಯತೆ ಹೆಚ್ಚಾಗಿದೆ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಹೇಳಿದ್ದಾರೆ.

‘ಚಳಿ ಕಡಿಮೆಯಾಗುವವರೆಗೂ ರಾತ್ರಿ ವೇಳೆ ನಡಿಗೆ ಹೋಗುವುದು ಸೂಕ್ತವಲ್ಲ. ಹತ್ತಿ, ಉಣ್ಣೆಯ ಬಟ್ಟೆ ಧರಿಸಬೇಕು. ಕಿವಿ ಬೆಚ್ಚಗಿರುವ ಟೋಪಿ, ಸ್ವೆಟರ್, ಬ್ಲಾಂಕೆಟ್ ಬಳಸಿ ಆರೋಗ್ಯದ ಕಾಳಜಿ ವಹಿಸಬೇಕು’ ಎಂದು ತಿಳಿಸಿದ್ದಾರೆ.

‘ವೈರಲ್‌ ಜ್ವರ, ಕೆಮ್ಮು ನೆಗಡಿಗೆ ಕೋವಿಡ್‌ ಇರಬಹುದು ಎಂದು ಸಂಶಯ ಪಡುವುದು ಬೇಡ. ವೈದ್ಯರ ಸಲಹೆ ಪಡೆದು ಮಾತ್ರೆಗಳನ್ನು ಸ್ವೀಕರಿಸುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಹಾಗೂ ಮಾತ್ರೆಗಳು ಲಭ್ಯ ಇವೆ. ಸಾರ್ವಜನಿಕ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳಬೇಕು’ ಎಂದು ಹೇಳಿದ್ದಾರೆ.

‘ಒಂದು ವಾರದಿಂದ‌ ಹೊರ‌ ರೋಗಿಗಳ ಸಂಖ್ಯೆ ಹೆಚ್ಚಾಗಿದೆ. ನೆಗಡಿ, ಶೀತ, ಕೆಮ್ಮು ಇರುವವರೇ ಅಧಿಕ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಆಸ್ಪತ್ರೆಯಲ್ಲಿ ಲಭ್ಯವಿರುವ ಮಾತ್ರೆಗಳನ್ನು ಕೊಡಲಾಗುತ್ತಿದೆ’ ಎಂದು ಚಿಟಗುಪ್ಪದ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಕಿರಣ ಪಾಟೀಲ ಹಾಗೂ ಹುಲಸೂರಿನ ಸಮುದಾಯ ಆರೋಗ್ಯ ಕೇಂದ್ರದ ಮಕ್ಕಳ ತಜ್ಞ ಡಾ.ಸಂತೋಷ ಇಲ್ಲಾಮಲೆ ತಿಳಿಸಿದ್ದಾರೆ.

‘ನವಜಾತ ಶಿಶುಗಳಿಗೆ ಹೆಚ್ಚು ಅಪಾಯಕಾರಿ’
ಚಳಿಯ ಜತೆ ಮಾಲಿನ್ಯವೂ ಸೇರಿದಾಗ ವೈರಾಣು ಜ್ವರ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಮಕ್ಕಳಲ್ಲಿ ಇದು ಬಹಳ ಬೇಗ ಕಾಣಿಸಿಕೊಳ್ಳುತ್ತದೆ. ಶೀತಗಾಳಿ ನವಜಾತ ಶಿಶುಗಳು ಹಾಗೂ ಅಪೌಷ್ಟಿಕ ಮಕ್ಕಳಿಗೆ ಹೆಚ್ಚು ಅಪಾಯಕಾರಿಯಾಗಿದೆ. ಮಕ್ಕಳಿಗೆ ಕಾಲುಗವಸು (ಸಾಕ್ಸ್), ಟೊಪ್ಪಿಗೆ ಹಾಗೂ ಸ್ವೆಟರ್‌ ಹಾಕಿ ಬೆಚ್ಚನೆ ಹಾಸಿಗೆಯಲ್ಲಿ ಮಲಗಿಸಬೇಕು. ಬಾಣಂತಿಯರು ಸಹ ಬೆಚ್ಚನೆಯ ಬಟ್ಟೆ ಧರಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರತಿಕಾಂತ ಸ್ವಾಮಿ ಹೇಳಿದ್ದಾರೆ.

‘ಕೆಮ್ಮು, ನೆಗಡಿ ಇದ್ದರೆ ವೈದ್ಯರಿಗೆ ತೋರಿಸಿ’
‘ಶೀತವಾತಾವರಣದಿಂದಾಗಿ ಬಹುತೇಕ ಜನರಲ್ಲಿ ಜ್ವರ, ಕೆಮ್ಮು, ನೆಗಡಿ ಕಾಣಿಸಿಕೊಂಡಿದೆ. ಮೂರು ದಿನಗಳ ನಂತರವೂ ಕೆಮ್ಮು, ನೆಗಡಿ ಕಡಿಮೆಯಾಗದಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು’ ಎಂದು ಬ್ರಿಮ್ಸ್‌ನ ಕಿವಿ, ಮೂಗು ಹಾಗೂ ಗಂಟಲು ತಜ್ಞ ಡಾ.ರವಿ ಉದಗಿರೆ ಹೇಳಿದ್ದಾರೆ.

‘ಕೆಮ್ಮು, ನೆಗಡಿ ಬಂದ ತಕ್ಷಣ ಕೆಲವರು ಮೆಡಿಕಲ್‌ಗಳಲ್ಲಿ ಮಾತ್ರೆ ತೆಗೆದುಕೊಳ್ಳುತ್ತಿದ್ದಾರೆ. ಕೆಲವರು ಅತಿಯಾಗಿ ಹಾಗೂ ನಿರಂತರವಾಗಿ ಕಷಾಯ ಸೇವಿಸುತ್ತಿದ್ದಾರೆ. ಇದು ಬಾಯಿ ಹುಣ್ಣಿಗೆ ದಾರಿ ಮಾಡಿಕೊಡುತ್ತಿದೆ. ನಿಗದಿತ ಪ್ರಮಾಣದಲ್ಲಿ ಸೇವಿಸುವುದು ಒಳ್ಳೆಯದು. ವೈದ್ಯರ ಸಲಹೆ ಪಡೆಯದೇ ಮನೆಯಲ್ಲೇ ಕುಳಿತು ಮಾತ್ರೆ ಅಥವಾ ಔಷಧ ಸೇವನೆ ಮಾಡುವುದು ಬೇಡ’ ಎಂದು ಕಿವಿಮಾತು ಹೇಳಿದ್ದಾರೆ.

‘ಶೀತಗಾಳಿ ಆರೋಗ್ಯಕ್ಕೆ ಮಾರಕ’
‘ಒಂದು ವಾರದಿಂದ ಉತ್ತರ ದಿಕ್ಕಿನಿಂದ ಶೀತಗಾಳಿ ವೇಗವಾಗಿ ಬೀಸುತ್ತಿದೆ. ದಕ್ಷಿಣ ಭಾರತದ ರಾಜ್ಯಗಳಲ್ಲಿ ರಾತ್ರಿ ವೇಳೆಯಲ್ಲಿ ಕನಿಷ್ಠ ಉಷ್ಠಾಂಶ 10ರಿಂದ 8.5 ಡಿಗ್ರಿ ಸೆಲ್ಸಿಯಸ್‌ವರೆಗೆ ಕುಸಿಯುತ್ತಿದೆ. ಇನ್ನೂ ಒಂದು ವಾರ ಶೀತಗಾಳಿ ಮುಂದುವರಿಯುವ ಸಾಧ್ಯತೆ ಇದೆ. ಇದು ಬೆಳೆಗಳಿಗೆ ಒಳ್ಳೆಯದಾದರೂ ವ್ಯಕ್ತಿಯ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಲಿದೆ’ ಎಂದು ಕೃಷಿ ಸಂಶೋಧನಾ ಕೇಂದ್ರದ ಹವಾಮಾನ ವಿಭಾಗದ ತಂತ್ರಜ್ಞ ಬಸವರಾಜ ಬಿರಾದಾರ ಹೇಳುತ್ತಾರೆ.

‘ಬೀದರ್‌ ಜಿಲ್ಲೆಯಲ್ಲಿ ಒಂದು ತಿಂಗಳಿಂದ ಕನಿಷ್ಠ ಉಷ್ಣಾಂಶ 12ರಿಂದ 14 ಡಿಗ್ರಿ ಸೆಲ್ಸಿಯಸ್ ಆಸುಪಾಸಿನಲ್ಲೇ ಇದೆ. ಶುಕ್ರವಾರ ಬೆಳಗಿನ ಜಾವ 9.5 ಡಿಗ್ರಿ ಸೆಲ್ಸಿಯಸ್ ಹಾಗೂ ಭಾನುವಾರ 8.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ. ವೃದ್ಧರು, ಆಸ್ತಮಾ ರೋಗಿಗಳು ಹಾಗೂ ವಿವಿಧ ಕಾಯಿಲೆಯಿಂದ ಬಳಲುತ್ತಿರುವವರು ಮುನ್ನೆಚ್ಚರಿಕೆ ವಹಿಸುವುದು ಉತ್ತಮ’ ಎಂದೂ ಅವರು ಸಲಹೆ ನೀಡಿದ್ದಾರೆ.

ಪೂರಕ ಮಾಹಿತಿ: ಮನ್ಮಥ ಸ್ವಾಮಿ, ಮಾಣಿಕ ಭೂರೆ, ವೀರೇಶ ಮಠಪತಿ, ನಾಗೇಶ ಪ್ರಭಾ, ಬಸವರಾಜ ಪ್ರಭಾ, ಬಸವಕುಮಾರ ಕವಟೆ


ಈ ಸಂಪೂರ್ಣ ಸುದ್ದಿಯನ್ನು ಪ್ರಜಾವಾಣಿ ವೆಬ್ ಪೈಜ್ ನಿಂದ ಪಡೆಯಲಾಗಿದೆ,ಈ ಸುದ್ದಿಯ ಸಂಪೂರ್ಣ ಹಕ್ಕು ಪ್ರಜಾವಣಿಯಾಗಿದೆ,ನಾವು ಬೀದರ್ ಸುದ್ದಿ ಜನರಿಗೆ ತಲುಪಿಸಲು ಸಹಾಯ ಮಾಡುತ್ತಿದ್ದೇವೆ,