Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

253 ವಿದ್ಯಾರ್ಥಿಗಳಿಗೆ ಎರಡೇ ಕೋಣೆಗಳು

ಸಚಿವರೇ ಈ ಸಮಸ್ಯೆಗೆ ಪರಿಹಾರ ಯಾವಾಗ?

ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುವುದು ಯಾವಾಗ?

ಕೃಪೆ:ಪ್ರಜಾವಾಣಿ ಬೀದರ್

ಔರಾದ್: ಇಲ್ಲಿಯ ತಾಲ್ಲೂಕು ಕೇಂದ್ರದಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜು ಪೂರ್ಣಕಾಲಿಕ ಉಪನ್ಯಾಸಕರು, ತರಗತಿ ಕೋಣೆಗಳಂತಹ ಹಲವು ಶೈಕ್ಷಣಿಕ ಸೌಲಭ್ಯದಿಂದ ವಂಚಿತವಾಗಿದೆ.

ಕಾಲೇಜಿನಲ್ಲಿ 2010ರಿಂದ ಜೀವಶಾಸ್ತ್ರ, 2013ರಿಂದ ಇತಿಹಾಸ, 2018ರಿಂದ ಕನ್ನಡ ಹಾಗೂ ರಾಜ್ಯಶಾಸ್ತ್ರ ವಿಷಯಗಳಿಗೆ ಉಪನ್ಯಾಸಕರ ಹುದ್ದೆಗಳು ಖಾಲಿ ಇವೆ.

ವಿದ್ಯಾರ್ಥಿಗಳ ಶಿಕ್ಷಣದ ಹಿತದೃಷ್ಟಿಯಿಂದ ಪೂರ್ಣಕಾಲಿಕ ಉಪನ್ಯಾಸಕರನ್ನು ನೇಮಿಸುವಂತೆ ಹಲವು ಬಾರಿ ಸರ್ಕಾರದ ಗಮನಕ್ಕೆ ತರಲಾಗಿದೆ. ಆದರೆ, ಸರ್ಕಾರ ಅತಿಥಿ ಉಪನ್ಯಾಸಕರನ್ನು ನೆಚ್ಚಿಕೊಂಡಿದೆ. ಅರ್ಧ ಶೈಕ್ಷಣಿಕ ವರ್ಷ ಮುಗಿದ ಬಳಿಕ ಅತಿಥಿ ಉಪನ್ಯಾಸಕರ ನೇಮಕ ಆಗುತ್ತದೆ. ಇದರಿಂದ ವಿದ್ಯಾರ್ಥಿಗಳ ಕಲಿಕೆಗೆ ಹಿನ್ನಡೆಯಾಗುತ್ತಿದ್ದು, ಹಲವು ಪಾಲಕರು ತಮ್ಮ ಮಕ್ಕಳನ್ನು ಖಾಸಗಿ ಕಾಲೇಜಿಗೆ ಸೇರಿಸುತ್ತಿದ್ದಾರೆ’ ಎನ್ನುತ್ತಾರೆ ವಿದ್ಯಾರ್ಥಿ ಮುಖಂಡ ಅಶೋಕ ಶೆಂಬೆಳ್ಳಿ.

ಕೆಲ ವರ್ಷಗಳ ಹಿಂದೆ ನಿರ್ಮಾಣವಾದ ಕಾಲೇಜು ಕಟ್ಟಡ ಸರಿಯಾಗಿ ಸುಣ್ಣ-ಬಣ್ಣ ಕಂಡಿಲ್ಲ. ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗ ಸೇರಿ 253 ವಿದ್ಯಾರ್ಥಿಗಳು ಇದ್ದಾರೆ. ಆದರೆ, ಎರಡು ತರಗತಿ ಕೋಣೆಗಳಿವೆ. ಇತರೆ ಕಾರ್ಯಕ್ಕಾಗಿ ಮೀಸಲಿರುವ ಸಣ್ಣ ಕೊಠಡಿಗಳಲ್ಲಿ ಪಾಠ ಮಾಡುವುದು ಉಪನ್ಯಾಸಕರಿಗೆ ಅನಿವಾರ್ಯವಾಗಿದೆ ಎನ್ನುತ್ತಾರೆ ಬೋಧಕರೊಬ್ಬರು.

ಕಾಲೇಜಿನಲ್ಲಿ ಅಗತ್ಯಕ್ಕೆ ತಕ್ಕಷ್ಟು ಪುಸ್ತಕ ಹಾಗೂ ಪಾಠೋಪಕರಣಗಳು ಲಭ್ಯ ಇವೆ. ಆದರೆ, ಅವುಗಳನ್ನು ಒಪ್ಪವಾಗಿ ಜೋಡಿಸಿ ಇರಿಸಲು ಸ್ಥಳವೇ ಇಲ್ಲ. ಎಲ್ಲೆಂದರಲ್ಲಿ ಬಿದ್ದಿವೆ. ತಡೆಗೋಡೆ ಇಲ್ಲದೆ ಕೆಲವು ಪುಂಡರು ಸಂಜೆ ವೇಳೆ ಕಾಲೇಜು ಆವರಣವನ್ನು ತಮ್ಮ ಅಡ್ಡೆಯನ್ನಾಗಿ ಮಾಡಿಕೊಳ್ಳುತ್ತಾರೆ. ಕಟ್ಟಡದ ಸುತ್ತ ಹುಲ್ಲು, ಮುಳ್ಳಿನ ಪೊದೆ ಬೆಳೆದಿದೆ.

ಬಹುತೇಕ ಪಾಲಕರಿಗೆ ತಮ್ಮ ಮಕ್ಕಳ ಓದಿಗೆ ಹಣ ಖರ್ಚು ಮಾಡಿ ಖಾಸಗಿ ಕಾಲೇಜಿಗೆ ಸೇರಿಸುವಷ್ಟು ಸಾಮರ್ಥ್ಯ ಇಲ್ಲ. ಆದರೆ, ಸರ್ಕಾರಿ ಕಾಲೇಜಿಗೆ ಬಂದರೆ ಹಲವು ಸಮಸ್ಯೆಗಳಿಂದ ಆವೃತ್ತವಾಗಿದೆ. ಕಳೆದ ತಿಂಗಳಷ್ಟೇ ಅತಿಥಿ ಉಪನ್ಯಾಸಕರು ನೇಮಕಗೊಂಡರು. ಮುಂದಿನ ತಿಂಗಳು ಪರೀಕ್ಷೆ ಬರೆಯಬೇಕು. ಪಠ್ಯಗಳೇ ಪೂರ್ಣಗೊಳ್ಳದೆ ಪರೀಕ್ಷೆ ಎದುರಿಸುವುದು ಹೇಗೆ ಎಂದು ಮಾಳೆಗಾಂವ್ ಗ್ರಾಮದ ಪ್ರಥಮ ವರ್ಷದ ವಿಜ್ಞಾನ ವಿಭಾಗದ ವಿದ್ಯಾರ್ಥಿ ಅಜಯ ಅಳಲು ಪ್ರಶ್ನಿಸಿದರು.

ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ಶೌಚಾಲಯದ ವ್ಯವವಸ್ಥೆ ಇಲ್ಲ. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸರಿಯಾದ ಬಸ್ ಸೌಲಭ್ಯವೂ ಇಲ್ಲ. ಹೀಗಾದರೆ ನಮ್ಮ ಮಕ್ಕಳ ಭವಿಷ್ಯ ಹೇಗೆ’ ಎಂದು ಕಾಲೇಜು ಹಾಗೂ ಆ ಸಂಬಂಧಿತ ಸಮಸ್ಯೆಗಳ ಬಗ್ಗೆ ಪಾಲಕರು ಅಸಮಾಧಾನ ಹೊರಹಾಕಿದರು.

2008ರಲ್ಲಿ ಶಾಸಕನಾದ ಬಳಿಕ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಸ್ವಂತ ಕಟ್ಟಡ ವ್ಯವಸ್ಥೆ ಮಾಡಿದ್ದೆ. ತರಗತಿ ‌ಕೋಣೆಯಂತಹ ಇತರೆ ಶೈಕ್ಷಣಿಕ ಸೌಲಭ್ಯ ಕಲ್ಪಿಸಲು ಅನುದಾನದ ಕೊರತೆ ಇಲ್ಲ.

– ಪ್ರಭು ಚವಾಣ್, ಪಶುಸಂಗೋಪನಾ ಸಚಿವ

ಈಚೆಗೆ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ್ದೇನೆ. ಕೆಲ ಸಮಸ್ಯೆಗಳಿರುವುದು ನಿಜ. ನಮ್ಮಲ್ಲಿ ಎರಡು ತರಗತಿ ಕೋಣೆಗಳು ಮಾತ್ರ ಸುಸ್ಥಿತಿಯಲ್ಲಿವೆ. ನಾಲ್ಕು ಕೊಠಡಿಗಳು ತ್ವರಿತವಾಗಿ ಬೇಕಿದೆ. ಖಾಲಿ ಇರುವ ವಿಷಯಗಳ ಬೋಧನೆಗೆ ಅತಿಥಿ ಉಪನ್ಯಾಸಕರ ನೇಮಕ ಮಾಡಿಕೊಳ್ಳಲಾಗಿದೆ. ಹೆಚ್ಚುವರಿ ತರಗತಿ ತೆಗೆದುಕೊಂಡು ಪಠ್ಯ ಮುಗಿಸಲು ಅವರ ಮನವೊಲಿಸಲಾಗಿದೆ. ಕಾಲೇಜಿನಲ್ಲಿ ಕೊರತೆಗಳ ಕುರಿತು ಇಲಾಖೆಯ ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು. ಸ್ಥಳೀಯರಾಗಿರುವ ಪಶುಸಂಗೋಪನಾ ಸಚಿವ ಪ್ರಭು ಚವಾಣ್ ಅವರನ್ನು ಭೇಟಿ ಮಾಡಿ ಕೊಠಡಿ ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಲಾಗುವುದು.

– ಓಂಪ್ರಕಾಶ ದಡ್ಡೆ, ಪ್ರಾಂಶುಪಾಲ

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಕಂಪ್ಯೂಟರ್, ಗ್ರಂಥಾಲಯದ ವ್ಯವಸ್ಥೆ ಇಲ್ಲ. ಶೌಚಾಲಯದ ಸೌಲಭ್ಯವಿಲ್ಲದೆ ನಿತ್ಯ ಪರದಾಡುವಂತೆ ಆಗಿದೆ. ಕೂಡಲೇ ಇವುಗಳನ್ನು ಪರಿಹರಿಸಬೇಕು

– ಅಜಯ, ಪ್ರಥಮ ವರ್ಷದ ವಿದ್ಯಾರ್ಥಿ

ಸುದ್ದಿಯನ್ನು ಪ್ರಜಾವಾಣಿ ವೆಬ್ಸೈಟ್ ನಿಂದ ತೆಗೆದುಕೊಂಡಿದ್ದೇವೆ,ಈ ಸುದ್ದಿಯ ಮೇಲೆ ಪ್ರಜಾವಾಣಿ ಸಂಪೂರ್ಣ ಹಕ್ಕು ಹೊಂದಿದೆ
ಬೀದರ್ ಸುದ್ದಿಯನ್ನು ಬೀದರ ಜನರಿಗೆ ಮುಟ್ಟಿಸುವುದೇ ನಮ್ಮ್ ಗುರಿ