Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಬೀದರ್ (ಫೆ.04): ನಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅನೇಕ ಕಡೆಗಳಲ್ಲಿ ಒಳ್ಳೆಯ ಅಭಿವೃದ್ಧಿ ಕೆಲಸಗಳಾಗುತ್ತಿವೆ. ಅಧಿಕಾರಿಗಳು ಚನ್ನಾಗಿ ಕೆಲಸ ಮಾಡುತ್ತಿದ್ದಾರೆ. ಒಳ್ಳೆಯ ಕೆಲಸ ಮಾಡುತ್ತಿರುವ ಅಧಿಕಾರಿಗಳನ್ನು ಗುರುತಿಸಿ ಸನ್ಮಾನಿಸಿ ಗೌರವಿಸುವ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡುತ್ತೇನೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಸಿಂದೋಲ ಗ್ರಾಮದ ಗ್ರಾಮ ಪಂಚಾಯತಿ ಆವರಣದಲ್ಲಿ ಶುಕ್ರವಾರ ನಡೆದ ಬೀದರ್ ತಾಲೂಕು ವ್ಯಾಪ್ತಿಯ ತಾಲೂಕು, ಹೋಬಳಿ, ಗ್ರಾಮ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವ ಅಧಿಕಾರಿಗಳನ್ನು ಸನ್ಮಾನಿಸಿ ಗೌರವಿಸುವುದರಿಂದ ಅವರಿಗೆ ಪ್ರೋತ್ಸಾಹ ನೀಡಿದಂತಾಗುತ್ತದೆ‌. ಇನ್ನೂಳಿದ ಅಧಿಕಾರಿಗಳಿಗೆ ಒಳ್ಳೆ ಕೆಲಸ ಮಾಡಲು ಪ್ರೇರಣೆಯಾದಂತಾಗುತ್ತದೆ. ಆ ಕೆಲಸವನ್ನು ನಾನು ಮಾಡುತ್ತೇನೆ. ನೀವು, ಉತ್ತಮವಾಗಿ ಕೆಲಸ ಮಾಡುತ್ತಿರುವ ಅಧಿಕಾರಿಗಳ ಪಟ್ಟಿ ತಯಾರಿಸಿ ಕೊಡಿ ಎಂದು ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗದಿಗೆಪ್ಪ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಶಾಸಕರು ತಿಳಿಸಿದರು.
ಶಿಕ್ಷಣ ಇಲಾಖೆಯ ಪ್ರಗತಿ ಪರಿಶೀಲನೆಯೊಂದಿಗೆ ಜನಸ್ಪಂದನಾ ಕಾರ್ಯಕ್ರಮವನ್ನು ಆರಂಭಿಸಲಾಯಿತು. ಶಿಕ್ಷಣ ಇಲಾಖೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳು ಇಲಾಖೆಯ ಬಗ್ಗೆ ಮಾಹಿತಿ ಹಂಚಿಕೊಂಡರು. ಈ ವೇಳೆ ಸಿಂದೋಲ ಗ್ರಾಮದ ಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರು ಇಲ್ಲ. ತಡಪಳ್ಳಿಯಲ್ಲಿ ವಿಜ್ಞಾನ ಶಿಕ್ಷಕರ ಕೊರತೆಯಿದೆ. ಪಾತರಪಳ್ಳಿ ಗ್ರಾಮದಲ್ಲಿ ಕೂಡ ಶಿಕ್ಷಕರ ಕೊರತೆಯಿದೆ. ಅದರಿಂದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗುತ್ತಿದೆ. ಕೂಡಲೇ ಶಿಕ್ಷಕರನ್ನು ಒದಗಿಸಿಕೊಡಬೇಕೆಂದು ಗ್ರಾಮಸ್ಥರು ಒತ್ತಾಯಿಸಿದರು.
ಶಿಕ್ಷಕರ ಕೊರತೆ ಇರುವ ಗ್ರಾಮಗಳಿಗೆ ಶೀಘ್ರವಾಗಿ ಶಿಕ್ಷಕರನ್ನು ಒದಗಿಸಿಕೊಡುವ ವ್ಯವಸ್ಥೆಯನ್ನು ಶಿಕ್ಷಣ ಇಲಾಖೆಯ ಅಧಿಕಾರಿಗಳು ಮಾಡಬೇಕು. ಆ ಮೂಲಕ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಕಲ್ಪಿಸಿಕೊಡಬೇಕೆಂದು ಶಾಸಕರು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಸೂಚಿಸಿದರು. ವಾರದಲ್ಲಿಯೇ ಶಿಕ್ಷಕರನ್ನು ಒದಗಿಸಿಕೊಡುವ ಭರವಸೆಯನ್ನು ಬಿಇಒ ನೀಡಿದರು. ಇದೇ ವೇಳೆ ಶಾಲೆಯಲ್ಲಿ ನೀಡಲಾಗುತ್ತಿರುವ ಬಿಸಿಯೂಟ, ಮೊಟ್ಟೆಯ ಬಗ್ಗೆ ಅನೇಕರು ಸಮಸ್ಯೆಗಳನ್ನು ಹೇಳಿಕೊಂಡರು.
ಪ್ರಸ್ತುತ ಒಂದನೇ ತರಗತಿಯಿಂದ ಎಂಟನೇ ತರಗತಿಗಳ ಮಕ್ಕಳಿಗೆ ಶಾಲೆಗಳಲ್ಲಿ ಮೊಟ್ಟೆ ಕೊಡುತ್ತಿದ್ದಾರೆ. ಆದರೆ ಒಂಬತ್ತು ಮತ್ತು ಹತ್ತನೇ ತರಗತಿಯ ಮಕ್ಕಳಿಗೆ ನೀಡುತ್ತಿಲ್ಲ. ಒಂಬತ್ತು ಮತ್ತು ಹತ್ತನೇ ತರಗತಿ ಮಕ್ಕಳಿಗೂ ಮೊಟ್ಟೆ ನೀಡಬೇಕು ಎಂದು ಸಾರ್ವಜನಿಕರು ಮನವಿ ಮಾಡಿದರು. ಈ ವಿಷಯವಾಗಿ ಇದೇ ತಿಂಗಳು ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯುವುದಾಗಿ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಭರವಸೆ ನೀಡಿದರು.
ಶಾಲೆಗಳಲ್ಲಿ ಮಕ್ಕಳ ಹಾಜರಾತಿಯ ಕೊರತೆಯಾಗದಂತೆ ಪಾಲಕರು, ಪೋಷಕರು, ಅಧಿಕಾರಿಗಳು ಕ್ರಮವಹಿಸಬೇಕು. ಮಕ್ಕಳು ಪ್ರತಿನಿತ್ಯ ಶಾಲೆಗೆ ಬರುವ ರೀತಿಯ ವ್ಯವಸ್ಥೆಯನ್ನು ಸಂಬಂಧಿಸಿದವರು ಮಾಡಬೇಕು. ಮಕ್ಕಳಿಗೆ ಕೊಡುತ್ತಿರುವ ಬಿಸಿಯೂಟದಲ್ಲಿ ಯಾವುದೇ ರೀತಿಯ ಕೊರತೆಯಾಗಬಾರದೆಂದು ಸಂಬಂಧಿಸಿದ ಅಧಿಕಾರಿಗಳಿಗೆ ಶಾಸಕರು ಎಚ್ಚರಿಕೆ ನೀಡಿದರು.
ರಾಜಗೇರಾ ಗ್ರಾಮದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಪಶು ಆಸ್ಪತ್ರೆ ನಿರ್ಮಿಸಿಕೊಡಬೇಕು. ತಡಪಳ್ಳಿ, ಪಾತರಪಳ್ಳಿಯಲ್ಲಿ ಶಿಕ್ಷಕರ ಕೊರತೆ ನಿವಾರಿಸಬೇಕು. ರಸ್ತೆ, ಚರಂಡಿ, ಕುಡಿಯುವ ನೀರಿನ ವ್ಯವಸ್ಥೆಯ ಜೊತೆಗೆ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಬೇಕೆಂದು ವಿವಿಧ ಗ್ರಾಮಗಳ ಗ್ರಾಮಸ್ಥರು ಮನವಿ ಸಲ್ಲಿಸಿದರು. ಹಂತಹಂತವಾಗಿ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಒದಗಿಸಿಕೊಡುವ ಭರವಸೆಯನ್ನು ಅಧಿಕಾರಿಗಳು ಮತ್ತು ಶಾಸಕರು ನೀಡಿದರು. ಆರೋಗ್ಯ, ಪಂಚಾಯತ್ ರಾಜ್, ಕೃಷಿ, ಜೆಸ್ಕಾಂ, ತೋಟಗಾರಿಕೆ, ಪಶುಸಂಗೋಪನೆ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಇಲಾಖೆಯಲ್ಲಿನ ಪ್ರಗತಿಯ ಮಾಹಿತಿಯನ್ನು ಸಭೆಗೆ ನೀಡಿದರು. ಸಾರ್ವಜನಿಕರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದರು.
ಈ ಸಂದರ್ಭದಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ಕೀರ್ತನಾ, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗದಿಗೆಪ್ಪ ಕುರಕುಟ್ಟೆ, ವಾಟರ್ ಸಪ್ಲೈ ಎಇಇ ಅಶೋಕ ವಂಗಪಲ್ಲಿ, ಸಹಾಯಕ ಕೃಷಿ ನಿರ್ದೇಶನ ದೂಳಪ್ಪ, ಟಿಹೆಚ್ಒ ಸಂಗಾರೆಡ್ಡಿ, ಗ್ರಾಮ ಪಂಚಾಯತಿ ಅಧ್ಯಕ್ಷ ನರೇಶ ಮಲಗೊಂಡ, ಉಪಾಧ್ಯಕ್ಷೆ ಮಗಲಮ್ಮ ವಿಠಲ್, ಅರಣ್ಯ, ಜೆಸ್ಕಾಂ, ತೋಟಗಾರಿಕೆ, ಪಂಚಾಯತ್ ರಾಜ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ವಿವಿಧ ಗ್ರಾಮಗಳ ಗ್ರಾಮಸ್ಥರು, ಮುಖಂಡರು ಸೇರಿದಂತೆ ಅನೇಕರಿದ್ದರು.