Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೀದರ್ (ಫೆ.21): ಕುರಿ, ಮೇಕೆಗಳು ಮೃತಪಟ್ಟಾಗ ಸಾಕಾಣಿಕೆದಾರರಿಗೆ ನೀಡುತ್ತಿರುವ ಪರಿಹಾರದ ಮೊತ್ತವನ್ನು, ಸರ್ಕಾರದಿಂದ ನೀಡಲಾಗುತ್ತಿರುವ ಸಹಾಯಧನಗಳ ಮೊತ್ತವನ್ನು ಹೆಚ್ಚಿಸಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಕುರಿ, ಮೇಕೆ ಸಾಕಾಣಿಕೆದಾರರ ಪರ ಸದನದಲ್ಲಿ ಧ್ವನಿ ಎತ್ತಿದರು.


ಬೆಂಗಳೂರಿನ ವಿಧಾನಸೌಧದಲ್ಲಿ ಸೋಮವಾರ ನಡೆದ ಕಲಾಪದ ಪ್ರಶ್ನೋತ್ತರದ ವೇಳೆ ಕುರಿ, ಮೇಕೆ ಸಾಕಾಣಿಕೆದಾರರ ವಿಷಯವಾಗಿ ಚುಕ್ಕೆ ಗುರುತಿನ ಪ್ರಶ್ನೆ ಕೇಳಿ ಮಾತನಾಡಿದ ಅವರು, ಹೆಚ್ಚಾಗಿ ಹಾಲುಮತ, ಎಸ್ಸಿ, ಎಸ್ಟಿ ಸೇರಿದಂತೆ ಹಿಂದುಳಿದ ವರ್ಗದ ಬಡ ಜನರು ಕಷ್ಟಪಟ್ಟು ಕುರಿ, ಮೇಕೆ ಸಾಕಾಣಿಕೆ ಮಾಡುತ್ತಿದ್ದಾರೆ. ಈ ಸರ್ಕಾರ ಅಧಿಕಾರಕ್ಕೆ ಬರುವ ಮೊದಲು ಮೃತ ಕುರಿ, ಮೇಕೆಗಳಿಗೆ ತಲಾ ಐದು ಸಾವಿರ ರೂ. ಪರಿಹಾರ ನೀಡುತ್ತಿದ್ದರು. ಈ ಸರ್ಕಾರ ಕೊರೊನಾದ ನೆಪವೊಡ್ಡಿ ಕಳೆದ ಮೂರು ವರ್ಷಗಳಿಂದ ಪರಿಹಾರ ನೀಡಿಲ್ಲ.


ಪರಿಹಾರ ನೀಡದಿರುವುದರಿಂದ ಬಡ ಕುರಿ, ಮೇಕೆ ಸಾಕಾಣಿಕೆದಾರರು ಸಂಕಷ್ಟಕ್ಕೆ ಸಿಲುಕ್ಕಿದ್ದಾರೆ. ಈ ಹಿಂದೆ ಎಷ್ಟು ಕುರಿ, ಮೇಕೆಗಳು ಮೃತಪಟ್ಟಿವೆ ಎಂಬ ದಾಖಲೆಗಳನ್ನು ಪರಿಶೀಲನೆ ನಡೆಸಿ ಸಾಕಾಣಿಕೆದಾರರಿಗೆ ಪರಿಹಾರ ಒದಗಿಸಿಕೊಡಬೇಕು. ಕುರಿ, ಮೇಕೆಗಳ ಮರಿ ಮೃತಪಟ್ಟರೆ 2.5 ಸಾವಿರ ರೂ., ದೊಡ್ಡ ಕುರಿ, ಮೇಕೆ ಮೃತಪಟ್ಟರೆ 5 ಸಾವಿರ ರೂ. ಪರಿಹಾರವಿದೆ. ಆದರೆ ಈಗ ಕುರಿ, ಮೇಕೆಗಳು 20 ಸಾವಿರ ರೂ. ಗಿಂತ ಹೆಚ್ಚಿನ ಬೆಲೆ ಬಾಳುತ್ತಿವೆ. ಆಗಾಗಿ ಪರಿಹಾರದ ಮೊತ್ತವನ್ನು ಕನಿಷ್ಟ 10 ಸಾವಿರ ರೂ. ಆದ್ರು ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಕುರಿ, ಮೇಕೆ ಮೇಯಿಸಲು ವ್ಯವಸ್ಥೆ ಕಲ್ಪಿಸಬೇಕು:
ಕುರಿ, ಮೇಕೆಗಳನ್ನು ಬಡವರು ಸಾಕಾಣಿಕೆ ಮಾಡುತ್ತಾರೆ. ಅವರಿಗೆ ಅವುಗಳನ್ನು ಮೇಯಿಸಲು ಸಮಸ್ಯೆಯಾಗುತ್ತಿದೆ. ರೆವಿನ್ಯೂ ಲ್ಯಾಂಡ್ ಮತ್ತು ಪಾರೆಸ್ಟ್ ಲ್ಯಾಂಡ್ ಗಳಲ್ಲಿ ಕುರಿ, ಮೇಕೆಗಳಿಗೆ ನೀರಿನ ಸೌಲಭ್ಯ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಿಕೊಡುವ ವ್ಯವಸ್ಥೆ ಮಾಡುವ ತಿರ್ಮಾನವನ್ನು ಸರ್ಕಾರ ತೆಗೆದುಕೊಳ್ಳಬೇಕೆಂದು ಶಾಸಕರು ಸರ್ಕಾರವನ್ನು ಒತ್ತಾಯಿಸಿದರು.

ವರ್ಷದಲ್ಲೇ ಹಣ ಡಬಲ್:
ಬ್ಯಾಂಕ್ ಗಳಲ್ಲಿ ಹಣ ಹೂಡಿಕೆ ಮಾಡಿದರೆ ಹತ್ತು ವರ್ಷಗಳಿಗೆ ಡಬಲ್ ಆಗುತ್ತೆ. ಆದ್ರೆ ಕುರಿ, ಮೇಕೆ ಸಾಕಾಣಿಕೆಯಿಂದ ಒಂದು ವರ್ಷದಲ್ಲೇ ಡಬಲ್ ಆಗುತ್ತದೆ. ಆಗಾಗಿ ಕುರಿ, ಮೇಕೆ ಸಾಕಾಣಿಕೆಯನ್ನು ಉತ್ತೇಜಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಒತ್ತಾಯಿಸಿದರು.

ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ:
ಈ ವೇಳೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರ ಪ್ರಶ್ನೆಗಳಿಗೆ ಉತ್ತರಿಸಿದ ಪಶುಸಂಗೋಪನೆ ಸಚಿವ ಪ್ರಭು ಬಿ ಚವ್ಹಾಣ್ ರವರು, ಪರಿಹಾರದ ಮೊತ್ತವನ್ನು ಜಾಸ್ತಿ ಮಾಡಬೇಕೆಂದು ಹಿರಿಯ ಸದಸ್ಯರು, ನಮ್ಮ ಜಿಲ್ಲೆಯವರಾದ ಬಂಡೆಪ್ಪ ಖಾಶೆಂಪುರ್ ರವರು ಬೇಡಿಕೆ ಇಟ್ಟಿದ್ದಾರೆ. ಕೂಡಲೇ ಈ ಕುರಿತು ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳುವ ಕೆಲಸ ಮಾಡುತ್ತೇವೆ ಮತ್ತು ಇತರೆ ಬೇಡಿಕೆಗಳ ಬಗ್ಗೆ ಕೂಡ ಗಮನಹರಿಸುತ್ತೇವೆಂದರು.

ಸಹಾಯಧನದ ಮೊತ್ತ ಹೆಚ್ಚಿಸಿ:
ಬಳಿಕ ಉಪ ಪ್ರಶ್ನೆ ಕೇಳಿದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು, ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಕುರಿ, ಮೇಕೆ ಸಾಕಾಣಿಕೆಗೆ ಒದಗಿಸುತ್ತಿರುವ ಸಹಾಯಧನದ ಮೊತ್ತವನ್ನು 75 ಸಾವಿರ ರೂ.ಗೆ ಹೆಚ್ಚಿಸಬೇಕು. ನಮ್ಮ ಬಾರ್ಡರ್ ನಲ್ಲಿರುವ ತೆಲಂಗಾಣದಲ್ಲಿ ಕುರಿ, ಮೇಕೆ ಸಾಕಾಣಿಕೆಗೆ 90% ಸಬ್ಸಿಡಿ ನೀಡ್ತಿದ್ದಾರೆ. ಅಲ್ಲಿ 1.35 ಲಕ್ಷ ರೂ. ಸಹಾಯಧನ ನೀಡ್ತಿದ್ದಾರೆ. ಒಟ್ಟು 13 ಸಾವಿರ ಕೋಟಿ ರೂ. ಸಬ್ಸಿಡಿ ಅಲ್ಲಿ ನೀಡಿದ್ದಾರೆ. ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯ ಸಹಾಯಧನವನ್ನು 1.50 ಲಕ್ಷ ರೂ.ಗೆ ಹೆಚ್ಚಿಸಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಆಗ್ರಹಿಸಿದರು.

ಈ ವರ್ಷ 1400 ಕುರಿಗಳು ಮೃತಪಟ್ಟಿವೆ:
ಇದೇ ವೇಳೆ ಉಪ ಪ್ರಶ್ನೆ ಕೇಳಿದ ಯಾದಗಿರಿ ಜಿಲ್ಲೆ ಸುರಪುರ ಕ್ಷೇತ್ರದ ಶಾಸಕ ರಾಜುಗೌಡ (ನರಸಿಂಹ ನಾಯಕ)ರವರು, ಬಂಡೆಪ್ಪಣ್ಣ ಖಾಶೆಂಪುರ್ ರವರು ಹೇಳುತ್ತಿರುವುದು ಬಹಳ ಸತ್ಯವಿದೆ. ಅವರು ಜಾತಿಯಲ್ಲಿ ಕುರುಬರು, ನಾನು ವೃತ್ತಿಯಲ್ಲಿ ಕುರುಬ ನಾನು 7 ಸಾವಿರ ಕುರಿಗಳನ್ನು ಸಾಕಿದ್ದಿನಿ. ಅದರಲ್ಲಿ ಈ ವರ್ಷ 1400 ಕುರಿಗಳು ಮೃತಪಟ್ಟಿವೆ. ನಾವು ಹೇಗೋ ತಡೆದುಕೊಳ್ಳುತ್ತೇವೆ. ಆದರೆ ಬಡ ರೈತರಿಗೆ, ಬಡ ಕುರಿಗಾಯಿಗಳಿಗೆ ಸಮಸ್ಯೆಯಾಗುತ್ತಿದೆ.


ಮೊದಲಿನಿಂದ ಪರಿಹಾರ ನೀಡುತ್ತಿರುವುದನ್ನು ಈ ಬಾರಿ ಬಂದ್ ಮಾಡಿದ್ದಾರೆ. ಪರಿಹಾರದ ಮೊತ್ತವನ್ನು 10 ಸಾವಿರ ರೂ. ಗೆ ಹೆಚ್ಚಿಸಿದರೆ ಬಹಳಷ್ಟು ಅನುಕೂಲವಾಗುತ್ತದೆ ಎಂದು ಶಾಸಕ ರಾಜುಗೌಡರವರು ಸಚಿವರಲ್ಲಿ ಮನವಿ ಮಾಡಿದರು. ರಾಜುಗೌಡರ ಮತ್ತು ಬಂಡೆಪ್ಪ ಖಾಶೆಂಪುರ್ ರವರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿಗಳ ಜೊತೆಗೆ ಚರ್ಚೆ ಮಾಡುತ್ತೇನೆ. ಚರ್ಚಿಸಿ ಕ್ರಮಕೈಗೊಳ್ಳುತ್ತೇವೆಂದು ಸಚಿವ ಪ್ರಭು ಚವ್ಹಾಣ್ ರವರು ಉತ್ತರಿಸಿದರು.