Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಕಾಂಗ್ರೆಸ್, ಬಿಜೆಪಿ ವಿರುದ್ಧ ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ

ಸರ್ಕಾರ, ವಿರೋಧ ಪಕ್ಷದ ನಾಯಕರ ಬಂಡವಾಳ ಬಯಲು ಮಾಡಿದ ಹೆಚ್ಡಿಕೆ

ವರದಿ :ಹಣಮಂತ ದೇಶಮುಖ

ಬೀದರ್ (ಏ.23): ಈ ಹಿಂದ ಐದು ವರ್ಷ ಅಧಿಕಾರ ನಡೆಸಿದ್ದ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಈಗ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿಗಳು, ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿರುವ ಹೆಚ್.ಡಿ ಕುಮಾರಸ್ವಾಮಿರವರು ತೀವ್ರ ವಾಗ್ದಾಳಿ ನಡೆಸಿದರು.
ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ ಪಿ ಗ್ರಾಮದ ಹೊರವಲಯದಲ್ಲಿರುವ ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರ ನಿವಾಸದಲ್ಲಿ ಶನಿವಾರ ಬೆಳಗ್ಗೆ ಮಾಧ್ಯಮಗೋಷ್ಠಿ ನಡೆಸಿ ಅವರು ಮಾತನಾಡಿದರು.


ನಾಡಿನ ಬಡಮಕ್ಕಳಿಗೆ ಸರ್ಕಾರಿ ಹುದ್ದೆಗಳನ್ನು ಪಾರದರ್ಶಕತೆಯಿಂದ ನೀಡಬೇಕೆಂದು ಮುಖ್ಯಮಂತ್ರಿಗಳಿಗೆ ಸಲಹೆ ನೀಡುತ್ತೇನೆ. ರಾಜ್ಯದಲ್ಲಿ ಸರ್ಕಾರಿ ಹುದ್ದೆಗಳ ವಿಚಾರದಲ್ಲಿ ಬಹಳಷ್ಟು ಅವ್ಯವಹಾರಗಳು ನಡೆಯುತ್ತಿವೆ. ಸಹಕಾರಿ ಇಲಾಖೆಯ ಜಿಲ್ಲಾಮಟ್ಟದ ಹಾಲು ಉತ್ಪಾದಕರ ಸಂಘಗಳಲ್ಲಿ ತುಂಬಿಕೊಳ್ಳುವ ಹುದ್ದೆಗಳಲ್ಲಿ ಬಹಳಷ್ಟು ಅವ್ಯವಹಾರ ನಡೆಯುತ್ತಿವೆ ಎಂದರು.
ಹಾಲು ಉತ್ಪಾದಕರ ಸಂಘಗಳ ನೌಕರಿಗೆ 25-50 ಲಕ್ಷ ರೂ. ನಿಗಧಿ:
ಜಿಲ್ಲಾ ಹಾಲು ಉತ್ಪಾದಕರ ಸಂಘಗಳಲ್ಲಿನ ನೌಕರಿಗಳ ನೇಮಕಕ್ಕೆ 25 ರಿಂದ 50 ಲಕ್ಷ ರೂ. ಗಳನ್ನು ನಿಗಧಿ ಮಾಡಿದ್ದಾರೆ. ಇದು ನನ್ನ ಗಮನಕ್ಕೆ ಇದೆ. ನನಗೆ ಮಾತ್ರವಲ್ಲ ಸರ್ಕಾರದಲ್ಲಿರುವ, ಆಡಳಿತ ನಡೆಸುವ ಪ್ರತಿಯೊಬ್ಬರಿಗೂ ಇದು ಗೊತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿರವರು ಗಂಭೀರ ಆರೋಪ ಮಾಡಿದರು.

Hdkumarswamy and bandeppa khasempura at bidar


ಕೆಪಿಎಸ್ಸಿಯಲ್ಲಿ ಕೋಟಿ, ಕೋಟಿ ವ್ಯವಹಾರ:
ಕೆಪಿಎಸ್ಸಿಯನ್ನು ಶುದ್ಧ ಮಾಡುತ್ತೇವೆ. ಸ್ವಚ್ಛಗೊಳಿಸುತ್ತೇವೆಂದು ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದಾಗ ಶ್ಯಾಮ ಬಟ್ಟರನ್ನು ಕರೆದುಕೊಂಡು ಹೋಗಿ ಕೂಡಿಸಿದ್ದರು. ಕೆಲವು ಮೆಂಬರ್ಸ್ ಗಳನ್ನು ನೇಮಕ ಮಾಡಿದ್ದರು. ಅಲ್ಲಿ ಒಂದೊಂದು ಅಸಿಸ್ಟೆಂಟ್ ಕಮಿಷನರ್ ಪೋಸ್ಟ್ ಗೆ 01 ರಿಂದ 01.50 ಕೋಟಿ ರೂ. ನಿಗಧಿ ಮಾಡಿದ್ದಾರೆ. ಎಲ್ಲರ ಬಳಿ ದುಡ್ಡು ತೆಗೆದುಕೊಂಡಿದ್ದಾರೆ. ದುಡ್ಡು ಕೊಟ್ಟು ಕೆಲಸ ಸಿಗದ ಅನೇಕರು ಇನ್ನೂ ಅಲೆಯುತ್ತಿದ್ದಾರೆ. ಅದನ್ನು ಸರಿ ಪಡಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಪ್ರಾಮಾಣಿಕ, ಕಟ್ಟುನಿಟ್ಟಿನ ಕ್ರಮ ತೆಗದುಕೊಳ್ಳಬೇಕು. ಈಗ ಪಿಎಸ್ಐ ವಿಚಾರವೊಂದು ಮಾತ್ರ ಹೊರಗಡೆ ಬಂದಿದೆ ಎಂದು ಹೆಚ್ಡಿಕೆ ಹೇಳಿದರು.


ಸಹಕಾರ ಸಚಿವರಿಗೆ ಅಡ್ವಾನ್ಸ್ ಕೊಡ್ಬೇಕು:
ಸಹಕಾರ ಕ್ಷೇತ್ರದಲ್ಲಿನ ನೇಮಕಕ್ಕೆ ಸಂಬಂಧಿಸಿದಂತೆ ಇಷ್ಟು ಜನರನ್ನು ನೇಮಕ ಮಾಡಿಕೊಳ್ಳಿ ಎಂದು ಒಪ್ಪಿಗೆ ತೆಗೆದುಕೊಳ್ಳಲು ಸಹಕಾರ ಇಲಾಖೆಯ ಸಚಿವರಿಗೆ ಅಡ್ವಾನ್ಸ್ ಕೊಡ್ಬೇಕು. ಸರ್ಕಾರಿ ಹುದ್ದೆಗಾಗಿ 25 ರಿಂದ 50 ಲಕ್ಷ ರೂ. ಕೊಟ್ಟು, ಅನೇಕರು ಮನೆಮಠ ಮಾರಿ ಕೆಲಸಕ್ಕೆ ಸೇರಿದ್ದಾರೆ. ಅನೇಕರು ನಮ್ಮ ಹತ್ರ ಕೂಡ ಬರ್ತಿರ್ತಾರೆ. ದುಡ್ಡಿನ ವಿಚಾರದಲ್ಲಿ ನನ್ನತ್ರ ಬರ್ಬೇಡಿ ಎಂದು ನಾನು ಹೇಳಿದ್ದೇನೆ. ಇದಕ್ಕೆ ಅಂತಿಮ ತೆರೆ ಎಳೆಯುವ ಕೆಲಸ ಸರ್ಕಾರ ಮಾಡಬೇಕು ಎಂದು ಕುಮಾರಸ್ವಾಮಿರವರು ಹೇಳಿದರು.


ದೊಡ್ಡವರ ಹೆಸರು ದುರುಪಯೋಗ ಮಾಡಿಕೊಳ್ಳುವವರಿದ್ದಾರೆ:
ಸರ್ಕಾರಿ ನೌಕರಿಗಳಲ್ಲಿನ ಲಂಚಾವತಾರದಲ್ಲಿ ದೊಡ್ಡವರಿದ್ದಾರೆ ಎಂದು ನೇರವಾಗಿ ಹೇಳಲಾಗದು. ದೊಡ್ಡವರ ಹೆಸರನ್ನು ದುರುಪಯೋಗ ಪಡಿಸಿಕೊಳ್ಳುವವರಿದ್ದಾರೆ. ಮೊಬೈಲ್ ಬಂದಾಗಿನಿಂದ ಅನೇಕರು ಅನೇಕರ ಜೊತೆಗೆ ಪೋಟೋ ತೆಗೆಸಿಕೊಳ್ಳುತ್ತಾರೆ. ದಿನಕ್ಕೆ ಸಾವಿರಾರು ಪೋಟೋಗಳನ್ನು ತೆಗೆದುಕೊಳ್ಳುತ್ತಾರೆ. ಅವುಗಳನ್ನು ದುರುಪಯೋಗ ಪಡೆಸಿಕೊಳ್ಳುತ್ತಾರೆ. ಪಿಎಸ್ಐ ನೇಮಕಾತಿಯಲ್ಲಿ ಪ್ರಾಮಾಣಿಕರಿಗೆ ಅನ್ಯಾಯವಾಗಿದೆ. ಅದನ್ನು ತನಿಕೆ ನಡೆಸಿ ನಿಜವಾದ ಅಪರಾಧಿಗಳ ಮೇಲೆ ಕ್ರಮಕೈಗೊಳ್ಳಬೇಕೆಂದರು.


‘ಬಿ.ಸಿ ಪಾಟೀಲ್’ ಬೇರತರ ಅನ್ಕೊಂಡಿದ್ದೆ:
ಗೃಹ ಸಚಿವನಾಗಲು ನಾನು ಸಮರ್ಥನಿದ್ದೇನೆಂದು ಕೃಷಿ ಸಚಿವರು ಹೇಳಿದ್ದಾರೆ. ಅವರು ಸಮರ್ಥರಿದ್ದಾರಾ ಎಂದು ಮಾಧ್ಯಮದವರು ಹೆಚ್ಡಿಕೆಯವರನ್ನು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಹೆಚ್ಡಿಕೆ, ಬಿ.ಸಿ ಪಾಟೀಲ್ ಯಾವುದರಲ್ಲಿ ಸಮರ್ಥರಿದ್ದಾರೆ ಎಂದು ಮರುಪ್ರಶ್ನೆ ಕೇಳಿದರು. ತಮ್ಮ ಪ್ರಶ್ನೆಯನ್ನು ಮತ್ತೊಮ್ಮೆ ಮಾಧ್ಯಮದವರು ವಿವರವಾಗಿ ಕೇಳಿದರು. ಈ ವೇಳೆ ಮಾತನಾಡಿದ ಹೆಚ್ಡಿಕೆ, ನಾನು ಯಾವುದೋ ಬೇರೆ ವಿಷಯ, ಬೇರೆತರ ಅನ್ಕೊಂಡಿದ್ದೆ ಎಂದರು.


ಈ ಸರ್ಕಾರದಲ್ಲಿ ಯಾರಿಗೂ ಹೇಳೋರು, ಕೇಳೋರು ಇಲ್ಲ:
ಈ ಸರ್ಕಾರದಲ್ಲಿ ಯಾರಿಗೂ ಹೇಳೋರು, ಕೇಳೋರು ಇಲ್ಲ. ಯಾರಿಗೂ ಯಾರ ಮೇಲೂ ಹಿಡಿತವಿಲ್ಲ. ಹೈಕಾಮಾಂಡ್ ನವರದ್ದು ಬೆಂಕಿ ಹಚ್ಚೋ ಕೆಲಸ, ಮುಂದಿನ ಚುನಾವಣೆ ಹೇಗೆ ಗೆಲ್ಲಬೇಕು ಎಂಬುದು ದೆಹಲಿ ಹೈಕಾಮಾಂಡ್ ನವರ ಲೆಕ್ಕಚಾರವಾಗಿದೆ. ಅದು ಇಲ್ಲಿ ಲೆಕ್ಕಕ್ಕೆ ಬರಲ್ಲ. ಕೇಂದ್ರದ ನಾಯಕರು ಹೇಳೋ ಮಾತುಗಳು ಲೆಕ್ಕಕ್ಕಿಲ್ಲ. ಈ ಬಿಜೆಪಿ ಸರ್ಕಾರದಲ್ಲಿ ಕೆಲವೇ ಕೆಲವು ವ್ಯಕ್ತಿಗಳು ಈ ದೇಶದಲ್ಲಿ ಗಂಟೆಗೆ 52 ಕೋಟಿ ರೂ. ಸಂಪಾದನೆ ಮಾಡ್ತಾರೆ ಎಂದರೆ ಬಡವರ ಕಥೆ ಏನು ಎಂದು ಹೆಚ್ಡಿಕೆ ಪ್ರಶ್ನಿಸಿದರು.


ಲೋಕಾಯುಕ್ತಕ್ಕೆ ಮೊಳೆ ಹೊಡೆದವರು ಯಾರು:
ಭ್ರಷ್ಟಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಮಾತಾಡ್ತಾರೆ. ಲೋಕಾಯುಕ್ತವನ್ನು ಮುಚ್ಚಿದವರು ಯಾರು? ಕಾಂಗ್ರೆಸ್ ನ ಆಡಳಿತದಲ್ಲಿದ್ದ ಕೇಸ್ ಗಳನ್ನು ಮುಚ್ಚಿ ಹಾಕಲು ಲೋಕಾಯುಕ್ತಕ್ಕೆ ಮೊಳೆ ಹೊಡೆದರು. ಎರಡು ರಾಷ್ಟ್ರೀಯ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳು. ಅವರು ಮಾಡುತ್ತಿರುವ ಪ್ರತಿಭಟನೆಗಳು ನಾಟಕಗಳಷ್ಟೆ ಎಂದರು.
ಸ್ವಾತಂತ್ರ್ಯ ಸರ್ಕಾರ ಬಂದ್ರೆ ಉತ್ತಮ ಆಡಳಿತ ನೀಡುತ್ತೇವೆ:
ನಮ್ಮದು ಸ್ವಾತಂತ್ರ್ಯವಾದ ಸರ್ಕಾರ ಬಂದರೆ ರಾಜ್ಯದಲ್ಲಿ ನಿಷ್ಪಕ್ಷಪಾತವಾದ, ಪಾರದರ್ಶಕವಾದ ಆಡಳಿತ ನೀಡುತ್ತೇವೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಯಾವುದಾದರು ಅವಾರ್ಡ್ ಕೊಡಬೇಕಾದಾಗ ಪರ್ಸೆಂಟೆಜ್ ಕೊಡ್ರಿ ಅಂತ ಎಂದು ಕೇಳಿಲ್ಲ. ಬೆಂಗಳೂರು ಮೇಟ್ರೋ ಯೋಜನೆಗೆ ಕೆಲಸ ಶುರು ಮಾಡಲು ಆದೇಶ ಮಾಡಿದ್ದು ನಾನು. ನಾನು ಯಾವ ಗುತ್ತಿಗೆದಾರರನ್ನು ನನ್ನ ಚೆಂಬರ್ ಗೆ ಕರಿಸಲಿಲ್ಲ. ನಿಗಧಿತ ಅವಧಿಯಲ್ಲಿ ಕೆಲಸ ಮುಗಿಸಬೇಕು ಎಂದು ನಮ್ಮ ಅಧಿಕಾರಿಗಳಿಗೆ ಹೇಳಿದ್ದೆ. ಇವತ್ತೂ ನಾನು ಹಾಗೆ ಇದ್ದೇನೆ. ಅದರಿಂದಲೇ ನೇರವಾಗಿ ಮಾತನಾಡುತ್ತೇನೆ ಎಂದರು.
ಲೂಟಿ ಮಾಡ್ತಿರೋರ ಮೇಲೆ ಬುಲ್ಡೋಜರ್ ಹತ್ತಿಸಬೇಕು:


ಬೆಂಗಳೂರಿನಲ್ಲಿ ಸರ್ಕಾರಿ ಜಾಗಗಳು, ಕೆರೆ ಕಟ್ಟೆಗಳನ್ನು ನುಂಗಿ, ಲೂಟಿ ಮಾಡ್ಕೊಂಡು, ಹಲವಾರು ರೀತಿಯಲ್ಲಿ ಅಕ್ರಮಗಳನ್ನು ನಡೆಸಿಕೊಂಡು ಕುಳಿತಿದ್ದಾರಲ್ಲ ಮೊದಲಿಗೆ ಅದರ ಮೇಲೆ ಬುಲ್ಡೋಜರ್ ಹತ್ತಿಸಬೇಕು. ಆ ಮೇಲೆ ಬಡವರ ಮೇಲೆ ಹತ್ತಿಸವಂತ್ರಿ ಎಂದು ಹೆಚ್ಡಿಕೆ ಹೇಳಿದರು.


ಹುಬ್ಬಳಿ ಗಲಭೆಗೆ ಎರಡು ಕಾರಣಗಳಿವೆ:
ಹುಬ್ಬಳ್ಳಿ ಗಲಭೆಗೆ ಎರಡು ಕಾರಣಗಳಿವೆ. ಧರ್ಮದ ಮೇಲೆ ರಾಜಕೀಯ ಮಾಡುವುದನ್ನು ನಿಲ್ಲಿಸಿ ಎಂದು ನಾನು ಸರ್ಕಾರಕ್ಕೆ ಮೊದಲಿನಿಂದಲೂ ಹೇಳ್ತಿದ್ದಿನಿ. ಮಾನವೀಯತೆಯನ್ನು ಉಳಿಸಬೇಕಾಗಿರುವುದು ಸರ್ಕಾರದ ಕೆಲಸ ಅದನ್ನು ಮಾಡಲಿಲ್ಲ ಅಂದ್ರೆ ಇನ್ನೇನು ಮಾಡ್ತಿರಿ ಎಂದು ಸರ್ಕಾರವನ್ನು ಹೆಚ್ಡಿಕೆ ಪ್ರಶ್ನಿಸಿದರು.
ಯಾರು ಬೇಕಾದರು ಹಗುರವಾಗಿ ಮಾತನಾಡಲಿ:
ಜನತಾ ಜಲಧಾರೆಯ ಬಗ್ಗೆ ಯಾರು ಬೇಕಾದರು ಹಗುರವಾಗಿ ಮಾತನಾಡಲಿ, ನಾನು ಅದಕ್ಕೆ ತಲೆ ಕೆಡಸಿಕೊಳ್ಳುವುದಿಲ್ಲ. ಕಳೆದ ಚುನಾವಣೆ ವೇಳೆಯಲ್ಲಿ ನಾನು ಸಾಲಮನ್ನಾದ ಬಗ್ಗೆ ಮಾತನಾಡಿದಾಗ, ಇವ್ನೂ ಎಲ್ಲಿಂದ ಮುಖ್ಯಮಂತ್ರಿಯಾಗ್ತಾನೆ, ಸುಳ್ಳು ಹೇಳ್ತಾನೆ. ಸಾಲಮನ್ನಾ ಮಾಡಲು ದುಡ್ಡು ಎಲ್ಲಿಂದ ತರ್ತಾನೆ ಎಂದು ಸಿದ್ದರಾಮಯ್ಯ ಹೇಳಿದ್ರು. ಅವರು ಹದಿಮೂರು ಬಾರಿ ಬಜೆಟ್ ಮಂಡನೆ ಮಾಡಿದ್ರು. ರಾಹುಲ್ ಗಾಂಧಿ ಬಂದು ಹೇಳುವವರೆಗೂ ರೈತರ ಸಾಲಮನ್ನಾ ಘೋಷಣೆ ಮಾಡ್ಲಿಲ್ಲ.
ರಾಹುಲ್ ಗಾಂಧಿ ಹಾವೇರಿಯಲ್ಲಿ ಡೈರಕ್ಷನ್ ಕೊಟ್ಟಾಗ ಸಾಲಮನ್ನಾ ಮಾಡ್ತಿನಿ ಎಂದಿದ್ದರು. ಅವರು ಘೋಷಣೆ ಮಾಡಿದ್ದ ಸಾಲಮನ್ನಾದಲ್ಲಿ 50% ತಿರಿಸಿದ್ದು ನಾನು. ಸಾಲಮನ್ನಾ ಯೋಜನೆಗೆ ಹಣಕೊಟ್ಟಿದ್ದು ನಮ್ಮ ಕಾಲದಲ್ಲಿ. ಇವತ್ತು ಜನತಾ ಜಲಧಾರೆಯ ಬಗ್ಗೆ ಹಗುರವಾಗಿ ಮಾತನಾಡುವ ಸಿದ್ದರಾಮಯ್ಯ ಐದು ವರ್ಷದ ಸರ್ಕಾರದಲ್ಲಿ ಏನು ಕೊಡುಗೆ ಕೊಟ್ಟರು.
40 ವರ್ಷ ಅಧಿಕಾರ ನಡೆಸಿದಾಗ ಯಾವ ಯೋಜನೆಗಳನ್ನ ಕಾಂಗ್ರೆಸ್ ಕೊಟ್ಟಿದೆ.? ಕಾರಂಜಾ ಸಂತ್ರಸ್ತ ರೈತರು ಭೂಸ್ವಾಧಿನದ ದುಡ್ಡು ಕೊಟ್ಟಿಲ್ಲ ಎಂದು ಪ್ರತಿಭಟನೆ ಮಾಡ್ಕೊಂಡು ಕುಳಿತ್ತಿದ್ದಾರೆ. ಐದು ವರ್ಷದ ಸರ್ಕಾರದಲ್ಲಿ ಏನು ಪರಿಹಾರ ನೀಡಿದ್ರಿ? ರೈತರಿಗೆ ಪರಿಹಾರ ನೀಡಲು ದುಡ್ಡಿರಲ್ಲ. ಆದ್ರೆ ಗುತ್ತಿಗೆದಾರರಿಗೆ ಯೋಜನೆಗಳನ್ನು ಪೈಪೋಟಿ ಮೇಲೆ ಮಾಡ್ತಿರಿ. ಇದು ನಿಮ್ಮ ನಡವಳಿಕೆ ಎಂದು ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿರವರು ಆಕ್ರೋಶ ವ್ಯಕ್ತಪಡಿಸಿದರು.
ನಮಗೆ ಒಂದು ಅವಧಿಗೆ ಅವಕಾಶ ನೀಡಿ:
ನಮಗೆ ಒಂದು ಅವಧಿಗೆ ಐದು ವರ್ಷದ ಸರ್ಕಾರ ನೀಡಿ, ನಾವು ಹೇಳಿದ್ದನ್ನು ಮಾಡದೇ ಹೋದರೇ ಪಕ್ಷವನ್ನೇ ವಿಸರ್ಜನೆ ಮಾಡ್ತೇನೆ ಎಂದು ಹೇಳ್ತಿದ್ದೇನೆ. ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು ಅಧಿಕಾರಕ್ಕೆ ಬಂದ ಕಾಂಗ್ರೆಸ್ ನವ್ರು ಏನು ಕೊಡುಗೆ ಕೊಟ್ಟಿದ್ದಾರೆ. ಅವರ ಬಗ್ಗೆ ದಿನನಿತ್ಯ ಚರ್ಚೆ ಮಾಡಿ ಏನು ಪ್ರಯೋಜನವೆಂದು ಕುಮಾರಸ್ವಾಮಿರವರು ಪ್ರಶ್ನಿಸಿದರು.
ಬಿಜೆಪಿಯವರು ಬೆಂಕಿ ಇಡಲು ಹೋದಾಗ ಧ್ವನಿ ಎತ್ತಿದ್ದೇ ನಾನು:
ಸರ್ವಜನಾಂಗದ ಶಾಂತಿಯ ತೋಟಕ್ಕೆ ಬಿಜೆಪಿಯವರು ಬೆಂಕಿ ಇಡಲು ಹೋದಾಗ ಧ್ವನಿ ಎತ್ತಿದ್ದೇ ನಾನು. ಬೆಂಕಿ ಹಾರಿಸಲು ಪ್ರಯತ್ನಿಸಿದ್ದು ನಾನು, ಕಾಂಗ್ರೆಸ್ ನವರು ಕೋಮಾಗೆ ಹೋಗಿದ್ದರು. ಬಿಜೆಪಿಯ ಬಿ ಟೀಮ್ ನಾವಲ್ಲ ಕಾಂಗ್ರೆಸ್ ನವರು. ನಾನು 14 ತಿಂಗಳು ಮುಖ್ಯಮಂತ್ರಿ ಇದ್ದಾಗ ಬದಾಮಿ ಕ್ಷೇತ್ರಕ್ಕೆ 1200 ಕೋಟಿ ರೂ. ಹಂಚಿಕೆ ಮಾಡಿದ್ದಿನಿ. ಬದಾಮಿ ಕ್ಷೇತ್ರದ ಕೆರೂರ್ ನಲ್ಲಿ ನಡೆಯುತ್ತಿರುವ ಕೆಲಸಕ್ಕೆ ಅನುದಾನ ನೀಡಿದ್ದು ನಾನು. ಅದಕ್ಕೆ ಈಗ ಗುದ್ದಲಿ ಪೂಜೆ ಮಾಡ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿರವರು ವಾಗ್ದಾಳಿ ನಡೆಸಿದರು.
ಈ ವೇಳೆ ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಬಂಡೆಪ್ಪ ಖಾಶೆಂಪುರ್, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್ ಸೇರಿದಂತೆ ಅನೇಕರಿದ್ದರು.