Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಗೊಂಡ ಸಮಾಜದ ಸಾಧಕರಿಗೆ ಸನ್ಮಾನ: ಸಭಾಪತಿ ರಘುನಾಥರಾವ್ ಮಲ್ಕಾಪೂರೆ, ಶಾಸಕ ಬಂಡೆಪ್ಪ ಖಾಶೆಂಪುರ್ ಚಾಲನೆ

ಬೀದರ್ (ಜೂ.12): ಬೀದರ್ ನಗರದ ಡಾ. ಚನ್ನಬಸವ ಪಟ್ಟದ್ದೆವರು ರಂಗಮಂದಿರದಲ್ಲಿ ಅಖಿಲ ಭಾರತೀಯ ಗೊಂಡ ಆದಿವಾಸಿ ಸಂಘ ಮತ್ತು ಬೀದರ್ ಜಿಲ್ಲಾ ಗೊಂಡ (ಕುರುಬ) ನೌಕರರ ಸಂಘದ ವತಿಯಿಂದ ಭಾನುವಾರ ಮಧ್ಯಾಹ್ನ ಹಮ್ಮಿಕೊಂಡಿದ್ದ ಗೊಂಡ ಸಮಾಜದ ಸಾಧಕರಿಗೆ ಅಭಿನಂದನಾ ಸಮಾರಂಭಕ್ಕೆ ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು, ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು, ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಗೀತಾ ಪಂಡಿತರಾವ್ ಚಿದ್ರಿರವರು ಚಾಲನೆ ನೀಡಿದರು.


ವಿಧಾನ ಪರಿಷತ್ ಹಂಗಾಮಿ ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಮಾತನಾಡಿ, ನಮ್ಮ ಸಮಾಜಕ್ಕೆ ನಾವು ಕೆಲಸ ಮಾಡುವುದು ನಮ್ಮ ತಾಯಿ ಸೇವೆ ಮಾಡಿದಾಗೆ. ಅದು ನಾವು ಯಾರಿಗೂ ಉಪಕಾರ ಮಾಡಿದಾಗೆ ಅಲ್ಲ. ನಾವು ಯಾವ ಸಮಾಜದಲ್ಲಿ ಹುಟ್ಟಿರುತ್ತೇವೆಯೋ ಆ ಸಮಾಜದ ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಿದೆ ಎಂದರು.
ಗೊಂಡ ಸಮಾಜದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಸಮಾಜದ ಪ್ರಮುಖರು ಮಾಡುತ್ತಿದ್ದಾರೆ. ಸಾಧಕರಿಗೆ ಸನ್ಮಾನ ಮಾಡುವ ಮೂಲಕ ಸಾಧಕರಿಗೆ ಬೆನ್ನು ತಟ್ಟುವ ಮತ್ತು ಸಮಾಜದ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಳಪ್ಪ ಅಡಸಾರೆರವರ ತಂಡ ಮಾಡುತ್ತಿದೆ. ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಪ್ರಾಮಾಣಿಕ ಕೆಲಸವನ್ನು ಸಮಾಜದ ಮುಖಂಡರು ಮಾಡುತ್ತಿದ್ದಾರೆ.


ಎಸ್ಟಿ ಸರ್ಟಿಫಿಕೇಟ್ ವಿಚಾರದಲ್ಲಿ ಗೊಂಡ ಸಮಾಜದಲ್ಲಿ ಇರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಸಮಾಜದ ಮತ್ತು ಅನ್ಯ ಸಮಾಜದ ಈ ಭಾಗದ ಜನಪ್ರತಿನಿಧಿಗಳು ಮಾಡುತ್ತಿದ್ದಾರೆ. ಆ ನಿಟ್ಟಿನಲ್ಲಿ ಶ್ರಮಿಸಿದ ಪ್ರತಿಯೊಬ್ಬರಿಗೂ ನಾವು ಅಭಿನಂದನೆ ಸಲ್ಲಿಸಬೇಕಾಗಿದೆ. ನಾನು ರಾಜಕೀಯಕ್ಕೆ ಬರ್ತಿನಿ ಎಂದು ಕನಸು ಮನಸ್ಸಿನಲ್ಲಿ ಕೂಡ ಅಂದುಕೊಂಡಿರಲಿಲ್ಲ. ಆಕಸ್ಮಿಕವಾಗಿ ರಾಜಕೀಯಕ್ಕೆ ಬಂದಿದ್ದೇನೆ.
ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿದ್ದ ನನಗೆ ಪಕ್ಷ ಮಹತ್ಮದ ಜವಾಬ್ದಾರಿ ನೀಡಿದೆ. ವಿಧಾನ ಪರಿಷತ್ ನ ಹಂಗಾಮಿ ಸಭಾಪತಿಯ ಹುದ್ದೆಯನ್ನು ಪಕ್ಷ ನನಗೆ ನೀಡಿದೆ. ನಾನು ಕಾನೂನು ಬದ್ಧವಾಗಿ ಕೆಲಸ ಮಾಡುತ್ತೇನೆ. ಎಸ್ಟಿ ಸರ್ಟಿಫಿಕೇಟ್ ವಿಷಯದಲ್ಲಿ ಗೊಂಡ ಸಮಾಜದಲ್ಲಿರುವ ತಾಂತ್ರಿಕ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ಸಮಾಜದ ಮತ್ತು ಅನ್ಯ ಸಮಾಜದ ಜನಪ್ರತಿನಿಧಿಗಳ, ಮುಖಂಡರ ಸಹಕಾರದೊಂದಿಗೆ ಆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣವೆಂದು ಸಭಾಪತಿಗಳಾದ ರಘುನಾಥರಾವ್ ಮಲ್ಕಾಪೂರೆರವರು ಹೇಳಿದರು.


ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮಾತನಾಡಿ, ರಘುನಾಥರಾವ್ ಮಲ್ಕಾಪೂರೆರವರು ರಾಜಕೀಯಕ್ಕೆ ಬರ್ತಾರೆ, ಅವರು ಎಮ್ಎಲ್ಸಿಯಾಗ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಅವರು ವಿಧಾನ ಪರಿಷತ್ ಸದಸ್ಯರಾದರು. ಅವರು ಸಭಾಪತಿ ಆಗ್ತಾರೆ ಅಂತ ಯಾರು ಕೂಡ ಅಂದುಕೊಂಡಿರಲಿಲ್ಲ. ಈಗ ವಿಧಾನ ಪರಿಷತ್ ಸಭಾಪತಿಯಾಗಿದ್ದಾರೆ. ಸಭಾಪತಿ ಸ್ಥಾನ ಬಹಳ ಮಹತ್ವದ ಸ್ಥಾನವಾಗಿದೆ ಎಂದರು.
ಆದಿವಾಸಿ ಗೊಂಡ ಸಂಘ ಸಮಾಜದ ಒಳಿತಿಗಾಗಿ ಕೆಲಸ ಮಾಡುತ್ತಿದೆ. ಈ ಸಮಾಜದ ಇತಿಹಾಸ ತಿಳಿಸುವ ಜೊತೆಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಸಂಘದ ಮುಖಂಡರು ಮಾಡುತ್ತಿದ್ದಾರೆ. ಎಸ್ಟಿ ಸರ್ಟಿಫಿಕೇಟ್ ವಿಷಯದಲ್ಲಿನ ಸಮಸ್ಯೆಗಳ ಪರಿಹಾರಕ್ಕಾಗಿ ನಿರಂತರವಾಗಿ ಹೋರಾಟ ಮಾಡಲಾಗುತ್ತಿದೆ. ದೆಹಲಿಯವರೆಗೂ ನಿಯೋಗ ತೆಗೆದುಕೊಂಡ ಹೋಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸುವ ಕೆಲಸ ಮಾಡಲಾಗುತ್ತಿದೆ.


ನಾವು ಯಾವುದೇ ಸ್ಥಾನದಲ್ಲಿದ್ದರೂ ಕೂಡ ಸಾಧ್ಯವಾದಷ್ಟು ಸಮಾಜ ಸೇವೆ ಮಾಡುವ ಕೆಲಸ ಮಾಡಬೇಕು. ಸಮಾಜದಲ್ಲಿನ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡಬೇಕು. ಸಮಾಜವನ್ನು ಜಾಗೃತಿಗೊಳಿಸುವ ಕೆಲಸ ಪ್ರತಿಯೊಬ್ಬರಿಂದಲೂ ಆಗಬೇಕು. ಎಲ್ಲರೂ ಒಗ್ಗಟ್ಟಾಗಿ ಸಾಗಬೇಕು. ಸಮಾಜದ ಐತಿಹಾಸಿಕ ವಿಷಯಗಳ ಬಗ್ಗೆ ತಿಳಿಸುವ ಕೆಲಸವಾಗಬೇಕೆಂದು ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ಕಾಂಗ್ರೆಸ್ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಗೀತಾ ಪಂಡಿತರಾವ್ ಚಿದ್ರಿರವರು ಮಾತನಾಡಿ, ನಾನು ನಮ್ಮ ಮನೆಯವರ ಸಹಾಯ ಸಹಕಾರದಿಂದ ಸಮಾಜದ ಪರವಾದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇನೆ. ನಮ್ಮ ಮನೆಯವರು ಕೂಡ ಸಮಾಜದ ಕೆಲಸಗಳನ್ನು ಮಾಡಿಕೊಂಡು ಬಂದಿದ್ದಾರೆ. ಸಮಾಜದ ಪ್ರತಿಯೊಬ್ಬರೂ ಒಗ್ಗಟ್ಟಾಗಿ ಸಾಗೋಣ. ಸಮಾಜದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳೋಣ ಎಂದರು. ಪ್ರಮುಖರಾದ ಮಾಳಪ್ಪ ಅಡಸಾರೆ, ಡಾ. ಕಾಮಣ್ಣ ಮೇತ್ರೆ, ವಿವಿಧ ರಾಜ್ಯಗಳಿಂದ ಬಂದಿದ್ದ ಗೊಂಡ ಸಮಾಜದ ಗುರುಗಳು, ಇತಿಹಾಸಕಾರರು, ಮುಖಂಡರು ಮಾತನಾಡಿ, ಗೊಂಡ ಸಮಾಜದ ಇತಿಹಾಸ ತಿಳಿಸಿಕೊಟ್ಟರು.


ಕಾರ್ಯಕ್ರಮದಲ್ಲಿ ಪೂಜ್ಯ ಶ್ರೀ ಮಲ್ಲಿಕಾರ್ಜುನ ಹಿರಿವಗ್ಗೆ, ಪೂಜ್ಯ ಶ್ರೀ ರತನ್ ಉಹಿಕೆ ಮಹಾರಾಜ, ಥಿರು ಸೀಡಂ ಅರ್ಜು, ಥಿರು ಪ್ರಕಾಶ ನಾಮದೇವರಾವ. ಸಲಾವೆ, ಥಿರು ಅರಕಾ ಮಾಣಿಕರಾವ, ರಾಹುಲ್ ಭಿವಸನ್ ಕನ್ನಾಕೆ, ಮಾರುತಿ ಖಾಶೆಂಪುರ್, ಪಂಡಿತರಾವ್ ಚಿದ್ರಿ, ವಿಜಯಕುಮಾರ್ ಖಾಶೆಂಪುರ್, ಬಾಬುರಾವ್ ಮಲ್ಕಾಪುರೆ, ಮಲ್ಲಿಕಾರ್ಜುನ ಬಿರಾದಾರ ಸೇರಿದಂತೆ ಅನೇಕರಿದ್ದರು.