Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

‌ಔರಾದ : ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಸವಲತ್ತು ನೀಡುವುದನ್ನು ತಪ್ಪಿಸಲು ನಡೆಯುತ್ತಿರುವ ಹುನ್ನಾರವನ್ನು ಖಂಡಿಸಿ ಅಖಿಲ ಕರ್ನಾಟಕ ಬೇಡಜಂಗಮ ಸಂಘಟನೆಗಳ ಒಕ್ಕೂಟ ಔರಾದ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಮಾನ್ಯ ತಹಸೀಲ್ದಾರ ಅರುಣಕುಮಾರ ಕುಲಕರ್ಣಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಬೇಡ ಜಂಗಮರಿಗೆ ಸಂವಿಧಾನಬದ್ಧವಾಗಿ ದೊರೆಯಬೇಕಾದ ಬೇಡ ಜಂಗಮ ಜಾತಿ ಪ್ರಮಾಣ ಪತ್ರವನ್ನು ಸರಕಾರ ನೀಡಬೇಕು. ನಾವು ಈಗಾಗಲೇ ಬೇಡ ಜಂಗಮರು ಎನ್ನಲು ಹಲವಾರು ದಾಖಲೆಗಳು ಸರಕಾರದ ಮುಂದಿವೆ ಎಂದು ಜಂಗಮ ಸಮಾಜ ಮುಖಂಡ ಮಹಾರುದ್ರಯ್ಯ ಸ್ವಾಮಿ ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಾಜ ಮುಖಂಡ ರವೀಂದ್ರ ಸ್ವಾಮಿ ಮಾತನಾಡಿ ಬೇಡ ಜಂಗಮರು ಯಾರ ಹಕ್ಕನ್ನೂ ಕಿತ್ತುಕೊಂಡಿಲ್ಲ. ಮತ್ತು ಕಿತ್ತುಕೊಳ್ಳುತ್ತಿಲ್ಲ. ಆದರೆ ತಮಗೆ ಸಂವಿಧಾನಾತ್ಮಕವಾಗಿ ಸಿಗಬೇಕಾಗಿರುವ ಹಕ್ಕನ್ನು ಪಡೆದುಕೊಳ್ಳಲು ಹೋರಾಟ ಮಾಡುವ ಸ್ಥಿತಿ ಬಂದಿದೆ. ಡಾ|ಅಂಬೇಡ್ಕರ್‌ ಅವರು ಜಂಗಮರನ್ನು ಸಂವಿಧಾನ ರಚನೆ ಮಾಡುವಾಗ ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಸೇರ್ಪಡೆ ಮಾಡಿದ್ದಾರೆ. 101ಪರಿಶಿಷ್ಟ ಜಾತಿ ಪಟ್ಟಿಯಲ್ಲಿ ಬೇಡ ಜಂಗಮ ಸಮಾಜವನ್ನು ಸೇರಿಸಿದ್ದಾರೆ. ನಾವುಗಳು ಹೊಸದಾಗಿ ಸೇರಿಸಿ ಎನ್ನುತ್ತಿಲ್ಲ. ಈ ಸಮುದಾಯಕ್ಕೆ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡದಂತೆ ತಡೆ ಹಿಡಿದು ಸರ್ಕಾರದಿಂದ ಸುಮಾರು 75 ವರ್ಷಗಳಿಂದ ಸಮಾಜಕ್ಕೆ ಸರ್ಕಾರ ಮಾಡುವ ವಂಚನೆ ಮಾಡುವ ಮೂಲಕ ಸಮಾಜಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ನಮಗೆ ನ್ಯಾಯಯುತವಾಗಿ ಸಿಗಬೇಕಾದ ಪ್ರಮಾಣ ಪತ್ರ ನೀಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ನೆಹರೂ ಸ್ವಾಮಿ ಅವರು ಮಾತನಾಡಿ ರಾಜ್ಯದಲ್ಲಿ ಅತೀ ಹಿಂದುಳಿದ ಜಾತಿಗಳಲ್ಲಿ ಬೇಡ ಜಂಗಮ ಸಮಾಜವೂ ಒಂದು. ಆದ್ದರಿಂದ, ಕೇಂದ್ರ ಸರಕಾರ ಸಂವಿಧಾನದಲ್ಲಿ ಸ್ಪಷ್ಟವಾಗಿ ಬೇಡ ಜಂಗಮ ಜಾತಿಯ ಬಗ್ಗೆ ನಮೂದಿಸಿದೆ. ಅಲ್ಲದೇ, ಸೂರ್ಯನಾಥ ಕಾಮತ ವರದಿ ಮತ್ತು ಕೋರ್ಟ್‌ ಆದೇಶದಲ್ಲೂ ರಾಜ್ಯದ ವೀರಶೈವ ಜಂಗಮರೇ ಬೇಡ ಜಂಗಮರು ಎಂದು ಸ್ಪಷ್ಟವಾಗಿ ತಿಳಿಸಲಾಗದೆ, ಆದರೂ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ. ಆದ್ದರಿಂದ, ಜಂಗಮರೆಲ್ಲರೂ ಸಂಘಟನೆಯ ಮುಖಾಂತರ ನಮ್ಮ ಹಕ್ಕನ್ನು ಪಡೆಯಬೇಕಾಗಿದೆ ಎಂದರು.

ಬೇಡ ಜಂಗಮ ಸಮಾಜದ ಮನವಿಯನ್ನು ಸ್ವೀಕರಿಸಿದ ಮಾನ್ಯ ತಹಸೀಲ್ದಾರ ಅವರು ಮನವಿಯನ್ನು ಸ್ಪಂದಿಸಿ ರಾಜ್ಯ ಸರ್ಕಾರದ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸಂಗಯ್ಯ ಸ್ವಾಮಿ, ನ್ಯಾಯವಾದಿ ಸಂಜಯ್ ಮಠಪತಿ, ಸೋಮನಾಥ ಮುಧೋಳಕರ, ದಯಾನಂದ ಸ್ವಾಮಿ, ಸೂರ್ಯಕಾಂತ ಸ್ವಾಮಿ, ಅಮರಸ್ವಾಮಿ ಸ್ಥಾವರಮಠ, ಅಮರಲಿಂಗ ಸ್ವಾಮಿ, ವೀರೆಶ ಸ್ವಾಮಿ, ಕಾರ್ತಿಕ ಸ್ವಾಮಿ, ಕುಮಾರಸ್ವಾಮಿ, ಶಿವಾನಂದ ಸ್ವಾಮಿ ದಾಬಕಾ, ಉಮಾಕಾಂತ ಸ್ವಾಮಿ, ವಿಜಯಕುಮಾರ ಸ್ವಾಮಿ ಸೇರಿದಂತೆ ಸಮಾಜ ಬಾಂಧವರು ಪಾಲ್ಗೊಂಡಿದ್ದರು.