Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೀದರ್‌: ಬಸವನಹುಳುವಿನ ಕಾಟದಿಂದ ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು ರೈತರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ. ಕೆಡಿಪಿ ಸಭೆಯನ್ನೂ ಕರೆಯುತ್ತಿಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಿಲ್ಲೆಗೆ ಭೇಟಿ ಕೊಟ್ಟು ಜನರ ಸಮಸ್ಯೆ ಅರಿತುಕೊಳ್ಳಬೇಕು.

ರೈತರ ಸಮಸ್ಯೆಗಳಿಗೆ ಪರಿಹಾರ ದೊರಕಿಸಿಕೊಡಬೇಕು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ ಆಗ್ರಹಿಸಿದರು.

ಜಿಲ್ಲೆಯ ಆಡಳಿತ ಪಕ್ಷದವರೇ ಮೊದಲಿದ್ದ ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಿಸಿದ್ದಾರೆ. ಹೊಸ ಉಸ್ತುವಾರಿ ಸಚಿವರನ್ನು ಮುಂದುವರಿಸುವುದು, ಬಿಡುವುದು ಆ ಪಕ್ಷದ ಆಂತರಿಕ ವಿಚಾರ. ರಾಜ್ಯದಲ್ಲಿ ವ್ಯವಸ್ಥೆಯೇ ಹಾಳಾಗಿರುವ ಕಾರಣ ಬೇರೆ ಯಾರು ಬಂದರೂ ವ್ಯವಸ್ಥೆಯಲ್ಲಿ ಸುಧಾರಣೆ ಆಗದು. ಹೀಗಾಗಿ ನೇರವಾಗಿ ಮುಖ್ಯಮಂತ್ರಿ ಅವರಿಗೆ ಮನವಿ ಮಾಡಿಕೊಳ್ಳುತ್ತಿದ್ದೇವೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸಾಧ್ಯವಾದರೆ ಮುಖ್ಯಮಂತ್ರಿ ಬಳಿ ನಿಯೋಗದಲ್ಲಿ ತೆರಳಿ ಜಿಲ್ಲೆಯ ರೈತರು ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಅವರ ಗಮನಕ್ಕೆ ತರಲಾಗುವುದು ಎಂದು ಹೇಳಿದರು.

ಜಿಲ್ಲೆಯಲ್ಲಿ ಬಸವನಹುಳುವಿನ ಬಾಧೆಯಿಂದ ಈಗಾಗಲೇ ಆರು ಸಾವಿರ ಹೆಕ್ಟೇರ್ ಪ್ರದೇಶದಲ್ಲಿನ ಬೆಳೆ ನಾಶವಾಗಿದೆ. ಬಿತ್ತನೆ ಮಾಡಿದ ಶೇಕಡ 80ರಷ್ಟು ಪ್ರದೇಶದಲ್ಲಿನ ಬೆಳೆಯನ್ನು ಹುಳುಗಳು ತಿಂದು ಹಾಕಿವೆ. ಹುಳುಗಳನ್ನು ನಿಯಂತ್ರಿಸದಿದ್ದರೆ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಎಚ್ಚರಿಸಿದರು.

ಬಸವನಹುಳುವಿನ ಬಾಧೆಯಿಂದ ಬೆಳೆ ನಷ್ಟವಾದ ರೈತರಿಗೆ ಕನಿಷ್ಠ ಹೆಕ್ಟೇರ್‌ಗೆ ₹ 50ಸಾವಿರ ಪರಿಹಾರ ಕೊಡಬೇಕು. ಕೀಟ ಬಾಧೆ ತಡೆಗೆ ಕೃಷಿ ತಜ್ಞರ ತಂಡ ರಚಿಸಬೇಕು. ರೈತರಿಗೆ ಉಚಿತವಾಗಿ ಕ್ರಿಮಿನಾಶಕ ವಿತರಿಸಬೇಕು. ಸೋಯಾ ಬಿತ್ತನೆಗೆ ಅವಕಾಶ ಇರುವುದರಿಂದ ಉಚಿತ ಬಿತ್ತನೆ ಬೀಜ ಪೂರೈಕೆ ಮಾಡಬೇಕು ಎಂದು ಒತ್ತಾಯಿಸಿದರು.

ಬೆಳೆ ವಿಮೆ ಯೋಜನೆಯಿಂದ ರೈತರಿಗಿಂತ ವಿಮಾ ಕಂಪನಿಗಳಿಗೆ ಹೆಚ್ಚು ಲಾಭವಾಗುತ್ತಿದೆ. ಈ ವಿಷಯ ಅಧಿವೇಶನದಲ್ಲಿ ಚರ್ಚೆ ಆಗಬೇಕು. ಬೆಳೆ ನಷ್ಟ ಪರಿಹಾರ ಸಕಾಲದಲ್ಲಿ ರೈತರ ಕೈಗೆ ಸೇರುತ್ತಿಲ್ಲ. ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿ ಸರ್ಕಾರವೇ ಗೋಲ್‌ಮಾಲ್‌ ಮಾಡಿದೆ ಎಂದು ಗಂಭೀರ ಆರೋಪ ಮಾಡಿದರು.

ಒಂದು ಮನೆ ಸಹ ಮಂಜೂರು ಮಾಡಿಲ್ಲ: ಜಿಲ್ಲೆಯಲ್ಲಿ ಲಕ್ಷಾಂತರ ಜನರಿಗೆ ಸೂರು ಇಲ್ಲ. ಮೂರು ವರ್ಷಗಳ ಅವಧಿಯಲ್ಲಿ ಒಂದೇ ಒಂದು ಮನೆ ಮಂಜೂರು ಮಾಡಿಲ್ಲ. ಭಾಲ್ಕಿ ಕ್ಷೇತ್ರದಲ್ಲಿ ಲಭ್ಯವಿರುವ ನಿವೇಶನದಲ್ಲಿ ಬಡವರು ಮನೆ ಕಟ್ಟಿಕೊಂಡಿದ್ದಾರೆ. ಕಡಿಮೆ ನಿವೇಶನದಲ್ಲಿ ಮನೆ ಕಟ್ಟಿದ್ದನ್ನೇ ನೆಪ ಮಾಡಿಕೊಂಡು ಹಣ ಬಿಡುಗಡೆ ಮಾಡಿಲ್ಲ. ಆರು ಸಾವಿರ ಮನೆಗಳ ಪೈಕಿ 3,345 ಮನೆಗಳನ್ನು ಕಟ್ಟಿಕೊಂಡವರ ತಪ್ಪೇನು ಎಂದು ಪ್ರಶ್ನಿಸಿದರು.

ಕೇಂದ್ರ ಸಚಿವ ಭಗವಂತ ಖೂಬಾ ಜಾಹೀರಾತಿನಲ್ಲಿ ಸುಳ್ಳು ಮಾಹಿತಿ ಕೊಟ್ಟಿದ್ದಾರೆ. ಕಾಂಗ್ರೆಸ್‌ ಅವಧಿಯಲ್ಲಿ ಮಂಜೂರಾದ ಮನೆಗಳ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಿಲ್ಲ. ನಿಗದಿ ಪಡಿಸಿದ್ದಕಿಂತ ಕಡಿಮೆ ನಿವೇಶನದಲ್ಲಿ ಮನೆ ಕಟ್ಟಿಕೊಂಡಿದ್ದರೆ ಕಡಿಮೆ ಹಣ ಮಂಜೂರು ಮಾಡಬಹುದಿತ್ತು. ಭಾಲ್ಕಿ ಕ್ಷೇತ್ರದಲ್ಲಿ ಆರು ಸಾವಿರ ಜನರಿಗೆ ಅನ್ಯಾಯ ಮಾಡಿದ್ದೀರಿ. ಅವರ ಶಾಪ ತಟ್ಟಲಿದೆ ಎಂದರು.

ಬಿಜೆಪಿ ಸರ್ಕಾರ 2022ರ ವೇಳೆಗೆ ರೈತರ ಅದಾಯ ದುಪ್ಪಟ್ಟು ಮಾಡುವ ಭರವಸೆ ಕೊಟ್ಟಿತ್ತು. ಆದರೆ, ಎಲ್ಲ ಅಗತ್ಯ ವಸ್ತುಗಳ ಬೆಲೆ ದುಪ್ಪಟ್ಟು ಮಾಡಿದೆ. ವಿಮಾ ಕಂಪನಿಗಳ ಲಾಭ ಹೆಚ್ಚಿಸಿದೆ. ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಪಿಎಸ್‌ಐ, ಉಪನ್ಯಾಸಕರು ಹಾಗೂ ಎಫ್‌ಡಿಎ ನೇಮಕಾತಿಯಲ್ಲಿ ನಡೆದ ಹಗರಣಗಳು ಬೆಳಕಿಗೆ ಬರುತ್ತಿವೆ. ಸಾಲು ಸಾಲು ಹಗರಣಗಳೇ ಬಿಜೆಪಿ ಸಾಧನೆ ಎಂದು ವಾಗ್ದಾಳಿ ನಡೆಸಿದರು.

ಶಾಸಕರಾದ ರಾಜಶೇಖರ ಪಾಟೀಲ, ರಹೀಂ ಖಾನ್, ಕಾಂಗ್ರೆಸ್‌ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಜಾಬಶೆಟ್ಟಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮೀನಾಕ್ಷಿ ಸಂಗ್ರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ ಮೂಲಗೆ ಪತ್ರಿಕಾಗೋಷ್ಠಿಯಲ್ಲಿ ಇದ್ದರು.