Latest Post

ಈ ದೇಶದ ಸಂಪತ್ತು ಶಿಕ್ಷಕರು :ಡಾ ಮನ್ನಥ ಡೊಳೆ ವಸತಿ ನಿಲಯಗಳಿಗೆ 25% ಪ್ರತಿಶತ ಪ್ರವೇಶವನ್ನು ಹೆಚ್ಚಿಸುವಂತೆ ಎಬಿವಿಪಿ ಔರಾದ ಶಾಖೆ ಮನವಿ
Spread the love

ಔರಾದ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಸಾಧಿಸಲು ಪ್ರತಿಭೆ ಜತೆಗೆ ಸಾಧಿಸುವ ಛಲ, ಪ್ರಾಮಾಣಿಕ ಪ್ರಯತ್ನ, ತಪಸ್ಸು ಮತ್ತು ಶ್ರದ್ಧೆ ಇರಬೇಕೆಂದು ವಿಧಾನ ಪರಿಷತ್ ಸಭಾಪತಿ ರಘುನಾಥರಾವ ಮಲ್ಕಾಪೂರೆ ಹೇಳಿದರು.
ಪಟ್ಟಣದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಕಲ್ಯಾಣ ಮಂಟಪದಲ್ಲಿ ಸೋಮವಾರ ಪ್ರಭು ಎಂಟರ್‌ ಪ್ರೈಸಸ್ ವತಿಯಿಂದ ಆಯೋಜಿಸಿದ ಪ್ರತಿಭಾ ಪುರಸ್ಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಸಮಾಜದ ಜೊತೆಯಲ್ಲಿ ವಿದ್ಯಾರ್ಥಿಗಳು ಉತ್ತಮ ಬಾಂಧವ್ಯ ಬೆಸೆದುಕೊಳ್ಳಲು ಮಕ್ಕಳಿಗೆ ಎಳೆ ವಯಸ್ಸಿನಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಪರಿಚಯ ಮಾಡಿಕೊಡಬೇಕು. ಸಮಾಜಮುಖಿ ಬಾಳ್ವೆಯೊಂದಿಗೆ ವಿದ್ಯಾರ್ಥಿಗಳು ದೇಶಭಕ್ತಿ ಮೈಗೂಡಿಸಿಕೊಳ್ಳಬೇಕು ಎಂದರು.
ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಮಾತನಾಡಿ, ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿಯಾದಲ್ಲಿ ಮಾತ್ರ ಉಳಿದೆಲ್ಲ ಕ್ಷೇತ್ರಗಳ ಅಭಿವೃದ್ಧಿ ಸಾಧ್ಯವಾಗುವುದು. ಗಡಿ ತಾಲೂಕಿನ ಪ್ರತಿಭಾವಂತ ಮಕ್ಕಳ ಪ್ರೋತ್ಸಾಹಕ್ಕೆ ಸದಾ ಸಿದ್ದನಾಗಿರುವೆ ಎಂದ ಸಚಿವರು, ಕಳೆದ ದಶಕಕ್ಕೂ ಅಧಿಕ ದಿನಗಳಿಂದ ತಾಲೂಕಿನಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ಇನ್ನಿತರ ಶೈಕ್ಷಣಿಕ ಕೋರ್ಸ್ಗಳಲ್ಲಿ ಸಾಧನೆಗೈದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದ ಮೂಲಕ ಹುರಿದುಂಬಿಸಲಾಗುತ್ತಿದೆ.
ಶಿಕ್ಷಣದಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂಬುದನ್ನು ಬಲವಾಗಿ ನಂಬಿರುವ ನಾನು ಶಾಸಕನಾದ ನಂತರ ಔರಾದ ವಿಧಾನಸಭಾ ಕ್ಷೇತ್ರವನ್ನು ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸಲು ಮೊದಲ ಆದ್ಯತೆಯನ್ನಾಗಿಸಿಕೊಂಡು ಕೆಲಸ ಮಾಡುತ್ತಿದ್ದೇನೆ. ಔರಾದ್ ಮತ್ತು ಕಮಲನಗರ ತಾಲೂಕಿನಾದ್ಯಂತ ಕಡು ಬಡತನ, ಅನಾಥ ಹಾಗೂ ನಿರ್ಗತಿಕ ಮಕ್ಕಳು ಕೂಡ ಶಿಕ್ಷಣದಿಂದ ವಂಚಿತರಾಗದಂತೆ ಮಕ್ಕಳನ್ನು ಗುರುತಿಸಿ ಶಿಕ್ಷಣ, ಮದುವೆಯಂತಹ ಮಹತ್ವದ ಜವಾಬ್ದಾರಿಗಳು ಅತ್ಯಂತ ಪ್ರಾಮಾಣಿಕವಾಗಿ ನಿಭಾಯಿಸುತ್ತಿದ್ದೆನೆ ಎಂದರು.
ತಾಲೂಕಿನ ಅಭಿವೃದ್ಧಿಗೆ ಬದ್ಧ :
ಔರಾದ ತಾಲೂಕಿನಲ್ಲಿ ಸಾಕಷ್ಟು ಪ್ರಗತಿ ಕೆಲಸಗಳಾಗಿವೆ. ಕೈಗಾರಿಕೆಗಳನ್ನು ಸ್ಥಾಪಿಸಲು ಪ್ರಯತ್ನಿಸುತ್ತಿದ್ದೇನೆ. ಇದಕ್ಕೆ ಅಗತ್ಯವಿರುವ ರಸ್ತೆ ಸೇರಿದಂತೆ ಇನ್ನಿತರೆ ಎಲ್ಲ ಅಭಿವೃದ್ಧಿ ಕೆಲಸಗಳನ್ನು ಪರಿಣಾಮಕಾರಿಯಾಗಿ ಮಾಡಲಾಗುತ್ತಿದೆ. ಉದ್ಯೋಗಾವಾಶಗಳ ಸೃಷ್ಟಿಗೆ ಕೇಂದ್ರ ಸರ್ಕಾರದಿಂದ ಮಂಜೂರಾಗಿರುವ ಸಿಪೆಟ್ ಕೇಂದ್ರಕ್ಕೆ ರಾಜ್ಯ ಸರ್ಕಾರವು ಅಗತ್ಯ ಅನುದಾನ ನೀಡಿದೆ. ಇದಕ್ಕೆ ಜಮೀನು ಗುರುತಿಸಿದ್ದು, ಶೀಘ್ರವೇ ಭೂಮಿ ಪೂಜೆ ನೆರವೇರಿಸಲಾಗುವುದು ಎಂದು ಹೇಳಿದರು.
ಬಸವಕಲ್ಯಾಣ ಶಾಸಕ ಶರಣು ಸಲಗರ ಮಾತನಾಡಿ, ಇಡಿ ರಾಜ್ಯದಲ್ಲಿಯೇ ಅಪರೂಪವೆಂಬಂತೆ ಮಕ್ಕಳಿಗೆ, ಪಾಲಕರಿಗೆ, ಸಾಧಕ ವ್ಯಕ್ತಿತ್ವಗಳ ಜತೆಗೆ ಶಿಕ್ಷಕರಿಗೆ ಸನ್ಮಾನಗೈದು ಗೌರವಿಸಲಾಗುತ್ತಿದೆ. ಪ್ರತಿಭಾವಂತ ಮಕ್ಕಳಿಗೆ ಪ್ರೋತ್ಸಾಹ ನೀಡುವ ಜೊತೆಗೆ ಇನ್ನಿತರರಿಗೆ ಸ್ಪೂರ್ತಿ ದೊರೆಯಲಿದೆ ಎಂದರು.
ಮಾರ್ಗದರ್ಶಕರು, ಹಿರಿಯಣ್ಣ ಎಂದೆಲ್ಲ ಕೊಂಡಾಡಿದ ಶಾಸಕ ಸಲಗರ ಚವ್ಹಾಣ ಅವರು ಮಾಡುವ ಪ್ರತಿ ಕೆಲಸದಲ್ಲಿಯೂ ಸಹಕಾರ ನೀಡುವುದಾಗಿ ನುಡಿದರು. ಪಶು ಸಂಗೋಪನಾ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗಳು ತಂದು ಇಲಾಖೆಗೆ ಆಧುನಿಕತೆಯ ಸ್ಪರ್ಶ ನೀಡಿದ ಪ್ರಭು ಚವ್ಹಾಣ ಅವರ ಕಾರ್ಯವೈಖರಿ ಅದ್ಭುತವಾಗಿದೆ ಎಂದರು.
ಯುಪಿಎಸ್ಸಿ ಸಾಧಕ ಅನುರಾಗ ದಾರು ಅವರು ಮಾತನಾಡಿ, ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಸಚಿವ ಪ್ರಭು ಚವ್ಹಾಣ ಅವರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ಇದರ ಸದುಪಯೋಗ ಪಡೆಯಬೇಕು ಎಂದು ತಿಳಿಸಿದರು. ಯುವ ಮುಖಂಡ ಗುರುನಾಥ ರಾಜಗೀರಾ ಪ್ರಾಸ್ತಾವಿಕ ಮಾತನಾಡಿದರು.

ಸಾಧಕರೊಂದಿಗೆ ಪೋಷಕರಿಗೂ ಸನ್ಮಾನ:
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕಗಳಿಂದ ಉತ್ತೀರ್ಣರಾದ ವಿದ್ಯಾರ್ಥಿಗಳು, ಅವರ ಪೋಷಕರು, ಉತ್ತಮ ಸಾಧನೆಗೈದ ಶಾಲೆಯ ಶಿಕ್ಷಕರು ಮತ್ತು ಸಿಬ್ಬಂದಿಗೆ ಸಚಿವರು ಸನ್ಮಾನಿಸಿ ಪ್ರೋತ್ಸಾಹ ನೀಡಿದರು. ಇದೇ ವೇಳೆ ಯುಪಿಎಸ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ಅನುರಾಗ ದಾರು ಅವರು ಹಾಗೂ ಅವರ ಪೋಷಕರನ್ನು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ತಾಪಂ ಇಒ ಬೀರೇಂದ್ರ ಸಿಂಗ್, ಪಿಯು ಕಾಲೇಜು ಪ್ರಾಂಶುಪಾಲ ಓಂಪ್ರಕಾಶ ದಡ್ಡೆ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಎಸ್ ನಗನೂರ, ಮುಖಂಡರಾದ ವಸಂತ ಬಿರಾದಾರ, ಸುರೇಶ ಭೋಸ್ಲೆ, ಅಮೃತರಾವ ವಟಗೆ, ಶರಣಪ್ಪಾ ಪಂಚಾಕ್ಷರಿ, ರಮೇಶ ಬಿರಾದಾರ, ಶಿವಕುಮಾರ ವಡ್ಡೆ, ಬಾಲಾಜಿ ತೆಲಂಗ, ಸಂತೋಷ ಪೋಕಲವಾರ, ಕೇರವಾ ಪವಾರ, ದಯಾನಂದ ಹಳ್ಳಿಖೇಡೆ, ರಾಮಶೆಟ್ಟಿ ಪನ್ನಾಳೆ, ಹಣಮಂತ ಸುರನಾರ, ಖಂಡೋಬಾ ಕಂಗಟೆ ಸೇರಿದಂತೆ ಇತರರು ಉಪಸ್ಥಿತರಿದ್ದರು.