Latest Post

ಉಪನ್ಯಾಸಕ ಅಶೋಕ ಕೋರೆಗೆ ಪಿಎಚ್‌.ಡಿ ಡಾಕ್ಟರೇಟ್ : ಎಬಿವಿಪಿ ಯಿಂದ ಸನ್ಮಾನ ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ
Spread the love

ಸಚಿವ ಪ್ರಭು ಚವ್ಹಾಣರಿಂದ ದಾಬಕಾ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮ ಸಂಚಾರ
ಗ್ರಾಮಗಳ ಸರ್ವಾಂಗಿಣ ಅಭಿವೃದ್ಧಿಯೇ ನನ್ನ ಸಂಕಲ್ಪ: ಸಚಿವ ಪ್ರಭು ಚವ್ಹಾಣ

ಔರಾದ ಆ.30:- ಪಶು ಸಂಗೋಪನೆ ಸಚಿವರಾದ ಪ್ರಭು ಚವ್ಹಾಣ ಅವರು ಆಗಸ್ಟ್ 30ರಂದು ಔರಾದ(ಬಿ) ವಿಧಾನಸಭಾ ಕ್ಷೇತ್ರದ ದಾಬಕಾ ವ್ಯಾಪ್ತಿಯ 10ಕ್ಕೂ ಹೆಚ್ಚು ಹಳ್ಳಿಗಳಲ್ಲಿ ಗ್ರಾಮ ಸಂಚಾರ ಕೈಗೊಂಡು ಸಾರ್ವಜನಿಕರ ಅಹವಾಲುಗಳನ್ನು ಆಲಿಸಿದರು.

ತಹಸೀಲ್ದಾರರು, ಪಶು ಸಂಗೋಪನೆ, ಕೃಷಿ, ತೋಟಗಾರಿಕೆ, ಲೋಕೋಪಯೋಗಿ ಇಲಾಖೆ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ, ಜೆಸ್ಕಾಂ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ತಂಡದೊಂದಿಗೆ ಹಂಗರಗಾ, ಬೋಂತಿ, ಲಿಂಗಿ, ಸಾವರಗಾಂವ, ಬಾವಲಗಾಂವ, ಹೊಕ್ರಾಣಾ, ನಂದಿಬಿಜಲಗಾಂವ, ಚೊಂಡಿಮುಖೇಡ, ಚಿಕ್ಲಿ(ಯು), ಗಣೇಶಪೂರ್ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿ ಸಾರ್ವಜನಿಕರ ಸಮಸ್ಯೆಗಳ ಅಹವಾಲುಗಳನ್ನು ಆಲಿಸಿ, ಸಿಸಿ ರಸ್ತೆ, ಕುಡಿಯುವ ನೀರಿನ ಕಾಮಗಾರಿ, ವಿವಿಧ ಸರ್ಕಾರಿ ಕಟ್ಟಡಗಳ ದುರಸ್ತಿ, ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಗ್ರಾಮಗಳಲ್ಲಿ ಕಾಲ್ನಡಿಗೆಯ ಮೂಲಕ ಸಂಚರಿಸಿ ಜನತೆ ಎದುರಿಸುತ್ತಿರುವ ಸಮಸ್ಯೆಗಳನ್ನು ಖುದ್ದಾಗಿ ತಿಳಿದುಕೊಂಡರು. ಸ್ಥಳೀಯರನ್ನು ಮಾತನಾಡಿಸಿ ಅವರ ನೋವು-ನಲಿವುಗಳನ್ನು ಆಲಿಸಿದರು. ಸರ್ಕಾರದಿಂದ ಆಗಬೇಕಿರುವ ಕೆಲಸಗಳ ಬೇಡಿಕೆಗಳನ್ನು ಪಡೆದರು. ಕುಡಿಯುವ ನೀರು, ವಿದ್ಯುತ್ ಸಂಪರ್ಕ, ಪಡಿತರ ಸಮಸ್ಯೆ, ಪಿಂಚಣಿ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ಅಧಿಕಾರಿಗಳ ಮೂಲಕ ಸ್ಥಳದಲ್ಲೇ ಪರಿಹಾರ ಒದಗಿಸುವ ಮೂಲಕ ಗ್ರಾಮಸ್ಥರ ಮುಖದಲ್ಲಿ ಮಂದಹಾಸ ಮೂಡಿಸಿದರು.

ಗ್ರಾಮ ಸಂಚಾರದ ವೇಳೆ ಓಣಿಗಳಲ್ಲಿ ಸಿಸಿ ರಸ್ತೆಗಳನ್ನು ನಿರ್ಮಿಸಿಕೊಡುವುದು, ಸಮುದಾಯ ಭವನಗಳ ನಿರ್ಮಾಣ, ಸ್ಮಶಾನ ಭೂಮಿ ಮಂಜೂರು, ವಸತಿ ನಿಲಯಗಳ ನಿರ್ಮಾಣ, ನೀರಿನ ಟ್ಯಾಂಕ್ ದುರಸ್ತಿ, ಹೊಸ ಚರಂಡಿಗಳನ್ನು ನಿರ್ಮಿಸಿಕೊಡುವುದು, ಶಾಲಾ-ಕಾಲೇಜುಗಳಿಗೆ ಕಂಪೌAಡ್ ಗೋಡೆ ನಿರ್ಮಿಸಿಕೊಡುವುದು ಹೀಗೆ ಗ್ರಾಮಸ್ಥರು ನಾನಾ ಬೇಡಿಕೆಗಳನ್ನು ಸಲ್ಲಿಸಿದರು. ಎಲ್ಲ ಬೇಡಿಕಗಳನ್ನು ಒಂದೊAದಾಗಿ ಆದ್ಯತೆಯ ಮೇಲೆ ಈಡೇರಿಸಲಾಗುವುದೆಂದು ಸಚಿವರು ಭರವಸೆ ನೀಡಿದರು.

ವಿವಿದ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ: ಹಂಗರಗಾದಲ್ಲಿ ಕೆಕೆಆರ್‌ಡಿಬಿಯಿಂದ 30 ಲಕ್ಷ ಮೊತ್ತದಲ್ಲಿ ಕೈಗೊಂಡಿರುವ ಸಿಸಿ ರಸ್ತೆ, 2 ಲಕ್ಷದ ಹೈಮಾಸ್ಟ್ ದೀಪ, 172 ಲಕ್ಷದ ಜೆಜೆಎಂ ಕಾಮಗಾರಿ, ಬೋಂತಿಯಲ್ಲಿ 10 ಲಕ್ಷದ ಸಿಸಿ ರಸ್ತೆ, 1.67 ಕೋಟಿಯ ಜಲ ಜೀವನ ಮಿಷನ್, 2 ಲಕ್ಷದ ದೇವಸ್ಥಾನ ನಿರ್ಮಾಣ, 1.90 ಲಕ್ಷದಲ್ಲಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿರ್ಮಿಸಲಾಗುತ್ತಿರುವ ವಿಕಲಚೇತನ ಶೌಚಾಲಯ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.

ಲಿಂಗಿಯಲ್ಲಿ 10 ಲಕ್ಷದ ಸಿಸಿ ರಸ್ತೆ ಹಾಗೂ 2 ಲಕ್ಷದ ದೇವಸ್ಥಾನ ಅಭಿವೃದ್ಧಿ ಕಾಮಗಾರಿ, ಸಾವರಗಾಂವ್‌ನಲ್ಲಿ 10 ಲಕ್ಷದ ಸಿಸಿ ರಸ್ತೆ, 102.5 ಲಕ್ಷದ ಜೆಜೆಎಂ ಕಾಮಗಾರಿ, ಬಾವಲಗಾಂವ್‌ನಲ್ಲಿ ಸಿಸಿ ರಸ್ತೆ ಹಾಗೂ 2 ಲಕ್ಷದ ದೇವಸ್ಥಾನ ಅಭಿವೃದ್ಧಿ ಕಾಮಗಾರಿ, ಹೊಕ್ರಾಣಾದಲ್ಲಿ 15 ಲಕ್ಷದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟಡ, 2 ಲಕ್ಷದ ದೇವಸ್ಥಾನ ಅಭಿವೃದ್ಧಿ, 4.50 ಲಕ್ಷ ಹಾಗೂ 3.5 ಲಕ್ಷದ ಪ್ರತ್ಯೇಕ ಪೈಪ್‌ಲೈನ್ ಕಾಮಗಾರಿಗಳು, ನಂದಿ ಬಿಜಲಗಾಂವ್‌ನಲ್ಲಿ 2 ಲಕ್ಷದ ದೇವಸ್ಥಾನ ಅಭಿವೃದ್ಧಿ, ಚಿಕ್ಲಿ(ಯು)ನಲ್ಲಿ 2 ಲಕ್ಷದ ದೇವಸ್ಥಾನ ಅಭಿವೃದ್ಧಿ, ಕಿಶನ್‌ನಾಯಕ್ ತಾಂಡಾದಲ್ಲಿ 6 ಲಕ್ಷದ ಸಿಸಿ ರಸ್ತೆ ಕಾಮಗಾರಿ, ಭವಾನಿ ನಗರ ಬಾವಲಗಾಂವನಲ್ಲಿ 6ಲಕ್ಷದ ಸಿಸಿ ರಸ್ತೆ, ಕಾಲಾಪಟ್ಟಿ ತಾಂಡಾದಲ್ಲಿ 6 ಲಕ್ಷದ ಸಿಸಿ ರಸ್ತೆ, ಗಣೇಶಪೂರ್‌ನಲ್ಲಿ 10 ಲಕ್ಷದ ಸಿಸಿ ರಸ್ತೆ, 2 ಲಕ್ಷದ ದೇವಸ್ಥಾನ ಅಭಿವೃದ್ಧಿ 1.50 ಲಕ್ಷದಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಯ ದುರಸ್ಥಿ, ಹಾಗೂ 2 ಲಕ್ಷದ ಅಂಗನವಾಡಿ ದುರಸ್ತಿ ಕಾಮಗಾರಿಗೆ ಸಚಿವರು ಶಂಕುಸ್ಥಾಪನೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಸಚಿವರು, ಗ್ರಾಮಗಳಲ್ಲಿ ಚಾಲನೆ ನೀಡಲಾದ ಕಾಮಗಾರಿಗಳನ್ನು ಶೀಘ್ರ ಆರಂಭಿಸಬೇಕು. ಚಾಲ್ತಿಯಲ್ಲಿರುವ ಜಲ ಜೀವನ ಮಿಷನ್ ಯೋಜನೆ, ಶಾಲೆ, ಅಂಗನವಾಡಿ ಕಟ್ಟಡಗಳು ಸೇರಿದಂತೆ ಎಲ್ಲ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವಂತೆ ನೋಡಿಕೊಳ್ಳಬೇಕು. ತುರ್ತು ಅವಶ್ಯಕವಿರುವ ಕಾಮಗಾರಿಗಳನ್ನು ಮುತುವರ್ಜಿ ವಹಿಸಿ ಶೀಘ್ರ ಪೂರ್ಣಗೊಳಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ನಿರ್ದೇಶನ ನೀಡಿದರು.

ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಸಂಕಲ್ಪವಾಗಿದೆ. ಶಾಸಕನಾಗಿ ಆಯ್ಕೆಯಾದಾಗಿನಿಂದ ಈ ದಿಶೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಗ್ರಾಮೀಣ ಭಾಗದಲ್ಲಿರುವ ಜನರ ಸಮಸ್ಯೆಗಳನ್ನು ಅವರ ಬಳಿಗೆ ಹೋಗಿ ತಿಳಿದುಕೊಳ್ಳಬೇಕು. ಗ್ರಾಮಗಳಲ್ಲಿನ ಏನೇನು ಅಭಿವೃದ್ಧಿಯಾಗಬೇಕಿದೆ ಎನ್ನುವುದನ್ನು ತಿಳಿಯಬೇಕು ಎನ್ನುವ ಉದ್ದೇಶದಿಂದ ಗ್ರಾಮ ಸಂಚಾರ ಕಾರ್ಯಕ್ರಮವನ್ನು ಆರಂಭಿಸಿದ್ದೇನೆ. ಅಧಿಕಾರಿಗಳ ತಂಡದೊAದಿಗೆ ಎಲ್ಲ ಗ್ರಾಮಗಳಲ್ಲಿ ಸಂಚರಿಸಿ ಕೆಲವು ಸಮಸ್ಯೆಗಳಿಗೆ ಸಾಧ್ಯವಿದ್ದಲ್ಲಿ ಸ್ಥಳದಲ್ಲೇ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ ಎಂದು ಹೇಳಿದರು.

5 ಲಕ್ಷ ಪರಿಹಾರ ವಿತರಣೆ: ಬೋಂತಿ ಗ್ರಾಮದಲ್ಲಿ ಸಿಡಿಲು ಬಡಿತದಿಂದಾಗಿ ಮೃತಪಟ್ಟ ಪಂಡರಿ ಮಸನಾಗೋರೆ ಅವರ ಕುಟುಂಬಸ್ಥರಿಗೆ ಸಚಿವರು ಸರ್ಕಾರದ 5 ಲಕ್ಷದ ಪರಿಹಾರದ ಚೆಕ್ಕನ್ನು ವಿತರಿಸಿದರು. ಅಲ್ಲದೇ ನಂದಿ ಬಿಜಲಗಾಂವ್‌ನಲ್ಲಿ ಇತ್ತೀಚೆಗೆ ಆಕಸ್ಮಿಕವಾಗಿ ಮರಣ ಹೊಂದಿದ ಹಾವಪ್ಪ ಸಂಗ್ರಾಮ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ ವೈಯಕ್ತಿಕ ಧನಸಹಾಯ ಮಾಡಿದರು.

69 ಜನರಿಗೆ ವಸತಿ ಯೋಜನೆಯ ಕಾರ್ಯಾದೇಶ ಪತ್ರ ವಿತರಣೆ: ಸಚಿವರು ಔರಾದ ಹಾಗೂ ಕಮಲನಗರ ತಾಲ್ಲೂಕಿನ ಬೋಂತಿ, ಹಂಗರಗಾ, ಲಿಂಗಿ, ಸಾವರಗಾಂವ, ಚಿಕ್ಲಿ(ಯು), ಗಣೇಶಪೂರ್‌ಗಳಲ್ಲಿ 69 ಜನ ವಸತಿ ಯೋಜನೆಯ ಫಲಾನುಭವಿಗಳಿಗೆ ಕಾರ್ಯಾದೇಶ ಪ್ರತ್ರಗಳನ್ನು ವಿತರಿಸಿದರು.

ಅಪಪ್ರಚಾರಕ್ಕೆ ಕಿವಿಗೊಡದಿರಿ: ಕೆಲವರು ಇಲ್ಲಸಲ್ಲದ ಸುಳ್ಳು ಸುದ್ದಿಗಳನ್ನು ಹರಡಿಸಿ ಅಪಪ್ರಚಾರ ಮಾಡಲು ಪ್ರಯತ್ನಿಸುತ್ತಿದ್ದಾರೆ. ನಾನು ಯಾವಾಗಲೂ ಅಭಿವೃದ್ಧಿಯ ಪರವಾಗಿ ಕೆಲಸ ಮಾಡುತ್ತಿದ್ದೇನೆ. ಜನರೊಂದಿಗೆ ಇದ್ದು, ಅವರ ಸಮಸ್ಯೆಗಳನ್ನು ಪರಿಹರಿಸುವ ಕೆಲಸವನ್ನು ಮಾಡುತ್ತಿದ್ದೇನೆ. ಅತಿವೃಷ್ಟಿ ಘೋಷಣೆ ಕುರಿತಂತೆ ಉಹಾಪೋಹಗಳನ್ನು ಸೃಷ್ಟಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನಗಳು ನಡೆದಿವೆ. ರಾಜ್ಯದಲ್ಲಿ ಇನ್ನೂ ಅತಿವೃಷ್ಟಿ ಪ್ರದೇಶಗಳ ಘೋಷಣೆಯಾಗಿಲ್ಲ. ಮಳೆಯಾದಾಗ ನಾನು ಕ್ಷೇತ್ರದಲ್ಲಿ ಸಂಚರಿಸಿ ಹಾನಿಯನ್ನು ಕಣ್ಣಾರೆ ವೀಕ್ಷಿಸಿದ್ದೇನೆ. ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ ಔರಾದ ಹಾಗೂ ಕಮಲನಗರ ತಾಲ್ಲೂಕುಗಳನ್ನು ಅತಿವೃಷ್ಟಿ ಪ್ರದೇಶಗಳೆಂದು ಘೋಷಿಸುವಂತೆ ಮನವಿ ಮಾಡಿದ್ದೇನೆ. ಸರ್ಕಾರವು ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದೆ. ಇನ್ನೂ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಯಾವುದೇ ಕಾರಣಕ್ಕೂ ಜನ ಅಪಪ್ರಚಾರಗಳಿಗೆ ಕಿವಿಗೊಡಬಾರದು ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಔರಾದ ತಹಸೀಲ್ದಾರರಾದ ಅರುಣಕುಮಾರ ಕುಲಕರ್ಣಿ, ತಾಲ್ಲೂಕು ಪಂಚಾಯತ್ ಸಹಾಯಕ ನಿರ್ದೇಶಕ ಶಿವಕುಮಾರ ಘಾಟೆ, ಕೃಷಿ ಸಹಾಯಕ ನಿರ್ದೇಶಕ ಅನ್ನಾರಿ, ಪಶು ಸಂಗೋಪನೆ ಇಲಾಖೆಯ ಸಹಾಯಕ ನಿರ್ದೇಶಕ ಡಾ.ರಾಜಕುಮಾರ ಬಿರಾದಾರ, ಪಿಆರ್‌ಇ ಎಇಇ ಮಜಗೆ, ಲೋಕೋಪಯೋಗಿ ಇಲಾಖೆಯ ಎಇಇ ವೀರಶೆಟ್ಟಿ ರಾಠೋಡ, ಮುಖಂಡರಾದ ರಾಮಶೆಟ್ಟಿ ಪನ್ನಾಳೆ, ವಸಂತ ಬಿರಾದಾರ, ಸತೀಷ ಪಾಟೀಲ, ಸಂಜು ಮುರ್ಕೆ, ಧೊಂಡಿಬಾ ನರೋಟೆ ಹಾಗೂ ಇತರರು ಉಪಸ್ಥಿತರಿದ್ದರು.