Latest Post

ಸಾಕು ನಾಯಿಗಳಿಗೆ ತಪ್ಪದೇ ರೇಬೀಸ್ ಲಸಿಕೆ ನೀಡಿ: ಸಚಿವ ಪ್ರಭು ಚವ್ಹಾಣ ಕಂದಾಯ ಇಲಾಖೆ ಡಾಟಾ ಎಂಟ್ರಿ ಆಪರೇಟರ್‌ಗೆ ಸೇವಾ ಭದ್ರತೆ, ಸೂರ್ಯಕಾಂತ್ ನಾಗಮಾರಪಳ್ಳಿ ಮನವಿ
Spread the love

ಬೀದರ್ (ಆ.29): ಹೆಣ್ಣುಮಕ್ಕಳಲ್ಲಿ ಉಳಿತಾಯ ಮಾಡುವ ಗುಣ ಮತ್ತು ಶಕ್ತಿ ಇದೆ. ತಾವು ಗಳಿಸುವ ಹಣವನ್ನು ದುಂದು ವೆಚ್ಚ ಮಾಡದೆ ಸಾಧ್ಯವಾದಷ್ಟು ಉಳಿತಾಯ ಮಾಡುತ್ತಾರೆ ಎಂದು ಮಾಜಿ ಸಚಿವರು, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರು, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷರು, ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಮನ್ನಾಎಖೇಳ್ಳಿಯ ಶ್ರೀಮಹಾದೇವ ಮಂದಿರದ ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ನಿಂದ ಸೋಮವಾರ ಹಮ್ಮಿಕೊಂಡಿದ್ದ ‘ಶಿವ ಪಂಚಾಕ್ಷರಿ ಪಠಣ ಬಿಲ್ವಾರ್ಚನೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮ’ ವನ್ನು ಉದ್ಘಾಟಿಸಿ ಮಾತನಾಡಿದ ಅವರು, ಗಂಡಸರು ಎಷ್ಟು ಹಣ ಕೊಟ್ಟರು ಖರ್ಚು ಮಾಡುತ್ತಾರೆ. ಗಂಡುಮಕ್ಕಳಲ್ಲಿ ಉಳಿತಾಯ ಮನೋಭಾವ ಕಡಿಮೆ ಇರುತ್ತದೆ ಎಂದರು.
ಧರ್ಮಸ್ಥಳ ಸಂಸ್ಥೆಯಿಂದ ಮಹಿಳಾ ಸಬಲೀಕರಣ, ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಸಾಕಷ್ಟು ಒಳ್ಳೊಳ್ಳೆ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಗ್ರಾಮೀಣ ಭಾಗದ ಮಹಿಳೆಯರಲ್ಲಿ ಸಂಘಟನೆ, ಉಳಿತಾಯ ಮನೋಭಾವ ಹೆಚ್ಚಾಗುತ್ತಿದೆ. ಕೆರೆ ಅಭಿವೃದ್ಧಿ, ಗ್ರಾಮ ವಿಕಾಸದಂತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ. ಮಹಿಳೆಯರು ಸಂಸ್ಥೆಯ ಯೋಜನೆಗಳ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಹೆಗ್ಗಡೆಯವರಿಗೆ ರಾಜ್ಯಸಭಾ ಸ್ಥಾನ ನೀಡಿರುವುದು ಹೆಮ್ಮೆಯ ವಿಷಯ:


ಶಿಕ್ಷಣ, ಗ್ರಾಮೀಣಾಭಿವೃದ್ಧಿ ಸೇರಿದಂತೆ ಪ್ರತಿಯೊಂದು ಕ್ಷೇತ್ರದಲ್ಲಿ ತಮ್ಮದೆಯಾದ ಯೋಜನೆಗಳ ಮೂಲಕ ಮಹತ್ವದ ಬದಲಾವಣೆ ತರುವ ಕೆಲಸ ಮಾಡುತ್ತಿರುವ ಧರ್ಮಸ್ಥಳ ಸಂಸ್ಥೆಯ ಧರ್ಮಾಧಿಕಾರಿಗಳಾದ ವೀರೇಂದ್ರ ಹೆಗ್ಗಡೆರವರಿಗೆ ಕೇಂದ್ರ ಸರ್ಕಾರ ರಾಜ್ಯಸಭೆಯಲ್ಲಿ ಸ್ಥಾನ ನೀಡಿರುವುದು ಹೆಮ್ಮೆಯ ವಿಷಯವಾಗಿದೆ. ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವಿಷಯದಲ್ಲಿ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.

ಕಾಯಕ ಯೋಜನೆ ಜಾರಿಗೆ ತಂದಿದ್ದೆ:


ನಾನು ಸಹಕಾರ ಸಚಿವನ್ನಾಗಿದ್ದಾಗ ಗ್ರಾಮೀಣ ಭಾಗದ ಜನರ ಮತ್ತು ಸಹಕಾರ ಸಂಘಗಳ, ಸ್ವಸಹಾಯ ಸಂಘಗಳ ಒಳಿತಿಗಾಗಿ ಏನೆಲ್ಲಾ ಮಾಡಬಹುದು ಎಂಬ ಚಿಂತನೆ ನಡೆಸಿ ಅವತ್ತು ಕಾಯಕ ಎಂಬ ಯೋಜನೆಯನ್ನು ಜಾರಿಗೆ ತಂದಿದ್ದೆ. ಅದು ಈಗಲೂ ಚಾಲನೆಯಲ್ಲಿದೆ. ಆ ಯೋಜನೆಯಲ್ಲಿ ಡಿಸಿಸಿ ಬ್ಯಾಂಕ್ ಗಳ ಮೂಲಕ ಐದು ಲಕ್ಷ ರೂ.ಗಳವರೆಗೆ ಬಡ್ಡಿ ರಹಿತ ಸಾಲ ನೀಡಲಾಗುತ್ತದೆ. ಐದು ಲಕ್ಷ ರೂ.ಗಿಂತ ಹೆಚ್ಚಿಗೆ ಸಾಲ ತೆಗೆದುಕೊಂಡರೆ ಬಡ್ಡಿ ಇರುತ್ತೆ. ಅವತ್ತು ನಾನು ಚಾಲನೆ ನೀಡಿದ್ದ ಯೋಜನೆ ಈಗಲೂ ಜಾರಿಯಲ್ಲಿದೆ ಎಂದರು.
ಹಳ್ಳಿಗಳ ಅಭಿವೃದ್ಧಿಯಾದಾಗ ಮಾತ್ರವೇ ದೇಶದ ಅಭಿವೃದ್ಧಿ ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ಗ್ರಾಮೀಣ ಭಾಗದ ಜನರು ಸಹಕಾರ ಸಂಘಗಳ ಸದುಪಯೋಗ ಪಡೆದುಕೊಂಡು ಅಭಿವೃದ್ಧಿಯತ್ತ ಸಾಗಬೇಕಾಗಿದೆ. ಸ್ವಸಹಾಯ ಸಂಘಗಳಿಗೆ ಇನ್ನೂ ಹೆಚ್ಚಿನ ಆದ್ಯತೆ ನೀಡುವಂತೆ ನಾನು ಕೂಡ ಸರ್ಕಾರಕ್ಕೆ ಒತ್ತಾಯಿಸುವ ಕೆಲಸ ಮಾಡುತ್ತೇನೆ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಹೇಳಿದರು.


ಈ ಸಂದರ್ಭದಲ್ಲಿ ಮನ್ನಾಎಖೇಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಗುಂಡಮ್ಮ ಸುಭಾಷ್ ನಾಟಿಕರ್, ಧರ್ಮಸ್ಥಳ ಸಂಸ್ಥೆಯ ಜಿಲ್ಲಾ ನಿರ್ದೇಶಕ ಪ್ರವೀಣ್, ಮಹಾದೇವ ಮಂದಿರ ಸಮಿತಿಯ ಅಧ್ಯಕ್ಷ ವಿಜಯಕುಮಾರ್ ಭೀಮಣ್ಣ ಹಳೀಕರ್, ಮನ್ನಾಎಖೇಳ್ಳಿ ಪೊಲೀಸ್ ಠಾಣೆ ಪಿಎಸ್ಐ ಸುದರ್ಶನರೆಡ್ಡಿ, ದತ್ತಾತ್ರೇಯ ರಾಸೂರ, ಸಂತೋಷ ಮಳಿಖೇಡ್, ಯೂಸಪ್ ಅಲಿ ಜಮಾದಾರ, ಶಿಲಾ ವಾಗ್ಮಾರಿ, ಸರಸ್ವತಿ, ಬಸವರಾಜ, ದೌಲಪ್ಪ ಹಡಲಗಿ, ರೇಣುಕಾ, ಯಶೋದಾ, ಮಂಜುಭಾಯಿ, ಸುಧಾರಾಣಿ, ಸಂಗೀತಾ, ವಿಜಯಲಕ್ಷ್ಮಿ, ರೇಖಾ, ವೇದಾವತಿ, ಸುವರ್ಣಾ ಸೇರಿದಂತೆ ಅನೇಕರಿದ್ದರು.